ಅನುಶ್ರೀ ಆಪ್ತನ ಪರ ಕರಾವಳಿ ಶಾಸಕರ ಒತ್ತಡ.. ಒತ್ತಡಕ್ಕೆ ಕಾರಣವಾಗಿರುವ ಆ ಲಿಂಕ್​ ಏನು?

anushree1
Published on

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಹಿನ್ನೆಲೆಯಲ್ಲಿ ಬಂಧಿತನಾಗಿರುವ ನಟ-ಕೊರಿಯೋಗ್ರಾಫರ್​ ಕಿಶೋರ್​ ಶೆಟ್ಟಿ ಹೆಸರನ್ನು ಪ್ರಕರಣದಿಂದ ಕೈಬಿಡಲು ಕರಾವಳಿಯ ಶಾಸಕರೊಬ್ಬರು ಒತ್ತಡ ಹೇರಿದ್ದಾರೆ ಎಂಬುದು ಬಹಿರಂಗಗೊಂಡಿದೆ.

ಕಿಶೋರ್​ ಶೆಟ್ಟಿಗೆ ನಿರೂಪಕಿ ಅನುಶ್ರೀ ಜತೆಗೂ ಸ್ನೇಹವಿದ್ದ ಹಿನ್ನೆಲೆಯಲ್ಲಿ ಆತನ ಬಂಧನದ ಬಳಿಕ ಅನುಶ್ರೀಯನ್ನೂ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಈ ಎಲ್ಲದರ ಮಧ್ಯೆ ಕಿಶೋರ್​ನನ್ನು ಬಿಟ್ಟು ಬಿಡಲು ಆರಂಭದಿಂದಲೂ ಒತ್ತಡ ಬರುತ್ತಿತ್ತು ಎನ್ನಲಾಗಿದೆ.

ಪ್ರಕರಣದ ತನಿಖಾ ತಂಡದ ಸಿಸಿಬಿ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಬೆನ್ನಿಗೆ ಈಗ ಕಿಶೋರ್​ ಶೆಟ್ಟಿ ಹೆಸರನ್ನು ಪ್ರಕರಣದಿಂದ ಬಿಟ್ಟುಬಿಡಬೇಕು ಎಂದು ಶಾಸಕರೊಬ್ಬರು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣವಾಗಿರುವ ಲಿಂಕ್ ಬೇರೆಯೇ ಇದೆ.

ಬಂಧಿತ ಕಿಶೋರ್​ ಶೆಟ್ಟಿಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜತೆಗೂ ಸಂಪರ್ಕವಿದ್ದು, ವಿಚಾರಣೆ ವೇಳೆ ಆತ ಆ ಬಗ್ಗೆ ಬಾಯಿಬಿಟ್ಟರೆ ಬೆಟ್ಟಿಂಗ್ ದಂಧೆಯೂ ಬಯಲಾಗುತ್ತದೆ ಎಂಬ ಕಾರಣದಿಂದ ಬುಕ್ಕಿಯೊಬ್ಬ ಶಾಸಕರ ಮೂಲಕ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾನೆ ಎನ್ನಲಾಗಿದೆ. ಪರಿಣಾಮ, ಡ್ರಗ್ಸ್​ ಮಾಫಿಯಾ ಪ್ರಕರಣ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು, ತೀವ್ರ ತನಿಖೆ ನಡೆಸಿದರೆ ಮತ್ತಷ್ಟು ದಂಧೆಗಳ ಮಾಹಿತಿ ಬಹಿರಂಗಗೊಳ್ಳುವ ಲಕ್ಷಣಗಳು ಗೋಚರಿಸಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net