

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪದಗ್ರಹಣ ಮಾಡಿದ ಬೆನ್ನಲ್ಲೇ ಸಚಿವ ಸಂಪುಟ ಸೇರುವುದಕ್ಕೆ ತೆರೆಮರೆ ಲಾಬಿ ಶುರುವಾಗಿದೆ. ಆದಷ್ಟು ಶೀಘ್ರವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಬೊಮ್ಮಾಯಿ ಹೇಳಿರುವ ಕಾರಣ, ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಮುಂಬರುವ ವಿಧಾನಸಭೆ, ಲೋಕಸಭೆ ಸಾರ್ವತ್ರಿಕ ಚುನಾವಣಾ ತಯಾರಿಗೆ ವರಿಷ್ಠರು ಒತ್ತು ನೀಡಿ, ವಿಸ್ತರಣೆ ಕಸರತ್ತು ನಡೆಸಲಿದ್ದಾರೆ ಎಂಬ ಸುಳಿವು ಲಭಿಸಿದೆ. ಹೀಗಾಗಿ ಬಿಎಸ್ವೈ ಸಂಪುಟದಲ್ಲಿದ್ದ ಹಲವರು ತಮ್ಮ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ದಿಗಿಲಿನಿಂದ ಪ್ರಭಾವಬೀರಲು ಸಾಧ್ಯವಿರುವ ಮಾಗೋಪಾಯ ಶೋಧಿಸುತ್ತಿದ್ದಾರೆ. ಪ್ರದೇಶ, ಜಿಲ್ಲೆ, ಜಾತಿ-ವರ್ಗವಾರು ಪ್ರಾತಿನಿಧ್ಯದ ನೆಪದಲ್ಲಿ ವೈಯಕ್ತಿಕ ಅಪೇಕ್ಷೆಯನ್ನು ಹೊರ ಹಾಕುತ್ತಿದ್ದು, ಈಗಾಗಲೆ ಹಲವು ನಾಯಕರನ್ನು ಆಕಾಂಕ್ಷಿಗಳು ಭೇಟಿಯಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಮುಂದೆ ತಮ್ಮ ಬೇಡಿಕೆ ಮಂಡಿಸಿದ್ದಾರೆ. ಸಚಿವ ಸ್ಥಾನ ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಹೇಳುವ ಮೂಲಕ ಒತ್ತಡ ತಂತ್ರ ಪ್ರಯೋಗಿಸಿದ್ದಾರೆ.
ಮಾನದಂಡವೇ ಅಂತಿಮ: ಮಂತ್ರಿ ಮಂಡಲ ವಿಸ್ತರಣೆ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಯಾರನ್ನು ಬಿಡಬೇಕು ಎನ್ನುವುದು ಸಿಎಂ ಪರಮಾಧಿಕಾರವೆಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಹಿಂದಿನ ಎಲ್ಲ ಸಚಿವರ ಕಾರ್ಯನಿರ್ವಹಣೆ, ಕರೊನಾ ಸಂಕಷ್ಟ ಕಾಲದಲ್ಲಿ ಜವಾಬ್ದಾರಿ ನಿರ್ವಹಿಸಿದ ರೀತಿ ಬಗ್ಗೆ ದೆಹಲಿ ನಾಯಕರು ತಮ್ಮದೇ ಮೂಲದಿಂದ ಮಾಹಿತಿ ತರಿಸಿಕೊಂಡಿದ್ದಾರೆ. ಬಿಎಸ್ವೈ ಅಧಿಕಾರಾವಧಿಯಲ್ಲಿ ವರಿಷ್ಠರ ತೀರ್ವನದಂತೆಯೇ ಎಲ್ಲವೂ ನಡೆದಿತ್ತು. ಈಗಲೂ ಅದೇ ಮಾನದಂಡ ಅನ್ವಯವಾಗಲಿದ್ದು, ಪೂರ್ಣ ಪಟ್ಟಿ ದೆಹಲಿಯಲ್ಲಿ ಸಿದ್ಧವಾಗಲಿದೆ. ಪ್ರತಿಭೆ, ಸಾಮರ್ಥ್ಯವೇ ಪ್ರಮುಖ ಪಾತ್ರ ವಹಿಸಲಿವೆ. ಕಳೆದ ಅಧಿಕಾರಾವಧಿಯ ಕಾರ್ಯಕ್ಷಮತೆ, ಸರ್ಕಾರ ಮತ್ತು ಪಕ್ಷದ ಸಂಘಟನೆಗೆ ನೀಡಿದ ಕೊಡುಗೆ ಪರಿಗಣನೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ಮಹಾರಾಜ ಚೇರ್ ಬದಿಗೆ
ಅರಮನೆ ಮೈದಾನದಲ್ಲಿ ಆಯೋಜನೆಗೊಂಡ ಕಾರ್ಯ ಕ್ರಮದಲ್ಲಿ ವೇದಿಕೆ ಮೇಲೆ ಮುಖ್ಯಮಂತ್ರಿಗಾಗಿಯೇ ಮಹಾ ರಾಜ ಚೇರ್ ಹಾಕಲಾಗಿತ್ತು. ಇದನ್ನು ಗಮನಿಸಿದ ಬೊಮ್ಮಾಯಿ, ಈ ಚೇರ್ ಬೇಡ, ಸಾಮಾನ್ಯ ಕುರ್ಚಿಯೇ ಸಾಕು, ನಾನು ಕಾಮನ್ ಮ್ಯಾನ್ ಇದ್ದೇನೆ ಎಂದು ತಿಳಿಸಿ ಅಲ್ಲಿದ್ದವರ ಮನ ಗೆದ್ದರು.
ಹಿರಿಯರ ವಾದ
ಹೊಸಬರ ವಾದ
ನಾಲ್ಕು ಡಿಸಿಎಂ ಹುದ್ದೆ?
ಕಳೆದ ಬಾರಿ ಮೂರು ಡಿಸಿಎಂ ಹುದ್ದೆ ಸೃಜಿಸಿ ವರಿಷ್ಠರು ಹುಬ್ಬೇರುವಂತೆ ಮಾಡಿದ್ದರು. ಈ ಬಾರಿ ನಾಲ್ವರು ಡಿಸಿಎಂಗಳಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸಾಮಾಜಿಕ ನ್ಯಾಯ, ಸಮತೋಲನ ಕಾಪಾಡಿಕೊಳ್ಳುವ ನೆಲೆಯಲ್ಲಿ ಇಂತಹ ಚಿಂತನೆ ನಡೆಸಿದ್ದು, ಸದ್ಯಕ್ಕೆ ಇದೇ ನಿಲುವು ಫೈನಲ್ ಎಂದು ಹೇಳಲಾಗದು. ವೀರಶೈವ-ಲಿಂಗಾಯತ ಸಮುದಾಯದವರು ಸಿಎಂ ಆಗಿದ್ದಾರೆ. ಒಕ್ಕಲಿಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಮಾನ ಅವಕಾಶ ನೀಡಬೇಕಾದ ಅನಿವಾಯರ್åತೆ ಇದೆ. ಜಾತಿವಾರು ಪ್ರಾತಿನಿಧ್ಯದ ವಿಷಯದಲ್ಲಿ ಹಿರಿಯ ನಾಯಕರಿಗೆ ಒಲವಿಲ್ಲ. ಆದರೆ ಚುನಾವಣಾ ರಾಜಕೀಯದ ಭಾಗವಾಗಿ ಈ ತಂತ್ರಗಾರಿಕೆಗೆ ಮೊರೆ ಹೋಗಬೇಕಾಗಿದೆ. ಮಂತ್ರಿ ಮಂಡಲಕ್ಕೆ ಹೊಸತನದ ಸ್ಪರ್ಶ, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಯೇ ಪಕ್ಷದ ಮುಖ್ಯ ಗುರಿಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ವಲಸಿಗರ ವಾದ
ಯಾರು ಏನೆಂದರು?
ಹಳಬರು, ಹೊಸಬರನ್ನ ಸೇರಿಸಿಕೊಂಡು ಸಂಪುಟ ರಚನೆ ಮಾಡಬೇಕು. ಸಚಿವ ಸ್ಥಾನಕ್ಕಾಗಿ ನಾನು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ಮೋದಿ ಮಾಡಿದಂತೆ ಇಲ್ಲಿನ ಸಂಪುಟದಲ್ಲೂ ಬದಲಾವಣೆ ಆಗಬೇಕು.
| ಎಚ್.ವಿಶ್ವನಾಥ್ ವಿಧಾನಪರಿಷತ್ ಸದಸ್ಯ
ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ ಸಂಪುಟ ರಚನೆಯಾಗಲಿದೆ. ಬಹುಶಃ ಒಂದು ವಾರದಲ್ಲೇ ಆಗಬಹುದು. ಹಿರಿತನವನ್ನ ನೋಡಿ ಸಚಿವ ಸ್ಥಾನ ನೀಡಲಿದ್ದಾರೆ.
| ಆರ್.ಅಶೋಕ್ ಪದ್ಮನಾಭನಗರ ಶಾಸಕ
ನಾನು ತುಂಬಾ ಸಿನಿಯರ್ ಇದ್ದೇನೆ. ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು. ಕೆಲವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕೊಡಬೇಕು. ಕೊಟ್ಟರೂ, ಕೊಡದಿದ್ದರು ಕೆಲಸ ಮಾಡುತ್ತೇನೆ. ವರಿಷ್ಠರ ಜತೆಗೆ ಮಾತಾಡಿದ್ದೇನೆ, ಸಚಿವ ಸ್ಥಾನದ ಬಗ್ಗೆ ಮಾತಾಡಿಲ್ಲ.
| ತಿಪ್ಪಾರೆಡ್ಡಿ ಚಿತ್ರದುರ್ಗ ಶಾಸಕ
ನ್ಯಾಚುರಲಿ ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಅವಕಾಶ ನೀಡುತ್ತಾರೆಂಬ ನಿರೀಕ್ಷೆ ಇದೆ. ವರಿಷ್ಠರು ಏನು ತೀರ್ಮಾನ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
| ಕುಮಾರ್ ಬಂಗಾರಪ್ಪ ಸೊರಬ ಶಾಸಕ
ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಂತ ಹೇಳಿದ್ದೆ, ಆದರೆ ಒಬ್ಬರನ್ನೇ ಸಿಎಂ ಮಾಡೋಕೆ ಆಗುವುದು. ನೂರಕ್ಕೆ ನೂರಾಇಪ್ಪತ್ತು ಪರ್ಸೆಂಟ್ ಹೊಸ ಮಂತ್ರಿ ಮಂಡಲದಲ್ಲಿ ಸಚಿವ ನಾಗಿರುತ್ತೇನೆ. ಇತ್ತೀಚಿಗಷ್ಟೇ ಮಂತ್ರಿ ಆಗಿದ್ದು, ನಾನೂ ಹೊಸ ಮುಖ!
| ಉಮೇಶ್ ಕತ್ತಿ ಮಾಜಿ ಸಚಿವ
ಬೊಮ್ಮಾಯಿಯವರು ವರಿಷ್ಠರ ಜತೆ ಚರ್ಚೆ ಮಾಡಿ, ಸಂಪುಟದಲ್ಲಿ ಯಾರು ಇರಬೇಕು ಅಂತ ನಿರ್ಧಾರ ಮಾಡುತ್ತಾರೆ. ವರಿಷ್ಠರ ಭೇಟಿ ನಂತರ ಎಲ್ಲ ನಿರ್ಧಾರ ಆಗುತ್ತದೆ. ಹೊರಗಿನಿಂದ ಬಂದವರೂ ನಮ್ಮವರೇ.
| ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಈ ವಾರದಲ್ಲೇ ಸಂಪುಟ ರಚನೆಯಾಗಲಿದೆ. ವರಿಷ್ಠರ ಜತೆ ಚರ್ಚೆ ಮಾಡಿ ತೀರ್ವನಿಸಲಾಗುತ್ತದೆ. ಪಕ್ಷದ ಬಿ ಫಾರಂ ಪಡೆದು ಗೆದ್ದವರೆಲ್ಲ ನಮ್ಮ ಶಾಸಕರೇ, ವಲಸಿಗರು ಎನಿಸಲ್ಲ.
| ನಳಿನ್ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ನಾವು 11 ಮಂದಿಯೂ ಹೊಸ ಸಂಪುಟದಲ್ಲಿ ಮುಂದುವರಿಯುತ್ತೇವೆ. ನಾವೀಗ ಬಿಜೆಪಿಯವರು. ಅವಕಾಶ ಕೊಡಲ್ಲ ಎಂದು ಯಾರಾದರೂ ಹೇಳಿದ್ದಾರೆಯೇ? ಕೊಡಲಿಲ್ಲ ಎಂದರೆ ಪಕ್ಷದ ಕೆಲಸ ಮಾಡುತ್ತೇವೆ.
| ಎಂ.ಟಿ.ಬಿ.ನಾಗರಾಜ್ ಮಾಜಿ ಸಚಿವ
ನಮಗೆ ಪುನಃ ಸಚಿವ ಸ್ಥಾನ ಕೊಡಲ್ಲ ಎಂದು ಯಾರೂ ಹೇಳಿಲ್ಲವಲ್ಲ? ಅದೆಲ್ಲ ಮಾಧ್ಯಮಗಳ ಸೃಷ್ಟಿ. ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದು, ಅವಕಾಶ ಸಿಗಲಿದೆ.
| ಎಸ್.ಟಿ.ಸೋಮಶೇಖರ್ ಮಾಜಿ ಸಚಿವ
ಸಂಪುಟಕ್ಕೆ ಸೇರಿಸಿಕೊಳ್ಳುವ ತೀರ್ವನವನ್ನು ವರಿಷ್ಠರು ಕೈಗೊಳ್ಳುವರು. ಅದಕ್ಕೆ ನಾನು ಬದ್ಧನಿರುತ್ತೇನೆ. ನಮ್ಮದು ರಾಷ್ಟ್ರೀಯ ಪಕ್ಷ ಎಲ್ಲ ರೀತಿ ಯೋಚಿಸಿ ತೀರ್ಮಾನ ಮಾಡುತ್ತಾರೆ. ನನಗೂ ಸಂಪುಟದಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ.
| ಗೋಪಾಲಯ್ಯ ಮಾಜಿ ಸಚಿವ
ನಾಯಕತ್ವ ವಿಷಯದಲ್ಲಿ ನಮ್ಮ ಹೈಕಮಾಂಡ್ ತೀರ್ಮಾನ ಮಾಡಿದೆ. ಅದಕ್ಕೇ ಕಾರಣಗಳೂ ಇವೆ. ಎಲ್ಲವೂ ತೃಪ್ತಿ ಆಗುತ್ತೆ ಅಂತ ಅಲ್ಲ. ನಾವು ಬೊಮ್ಮಾಯಿ ಅವರನ್ನು ಒಪ್ಪಿಕೊಂಡಿದ್ದೇವೆ. ಉತ್ತರ ಪ್ರದೇಶ ರೀತಿ ಎರಡು ಮಕ್ಕಳ ನಿಯಂತ್ರಿಸುವ ಕಾನೂನು ಇಲ್ಲೂ ತರಬೇಕು. ಯತ್ನಾಳ್ ನೋಡಿದರೆ ಕೆಲವರಿಗೆ ಕಸಿವಿಸಿ ಆಗುತ್ತೆ. ನಾನು ಸಿಎಂ ಆದರೆ ಕೆಲವರ ಭ್ರಷ್ಟಾಚಾರ ಹೊರಬರುತ್ತೆ. ನಾನು ಸಚಿವನಾಗಲು ಅರ್ಜಿ ಹಾಕಲ್ಲ.
| ಬಸನಗೌಡ ಪಾಟೀಲ್ ಯತ್ನಾಳ್ ಶಾಸಕ
ಇಂದು ನವದೆಹಲಿಗೆ ಮುಖ್ಯಮಂತ್ರಿ
ಪ್ರವಾಹಪೀಡಿತ ಪ್ರದೇಶಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಜೆ ನವದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ರ್ಚಚಿಸಲಿದ್ದಾರೆ. ಸಿಎಂ ಆಯ್ಕೆ ಪ್ರಕ್ರಿಯೆಗಾಗಿ ಬೆಂಗಳೂರಿಗೆ ಬಂದಿದ್ದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬುಧವಾರ ದೆಹಲಿಗೆ ಮರಳಿದ್ದು, ಈ ತಂಡ ನೀಡಲಿರುವ ಮಾಹಿತಿ ಆಧರಿಸಿ ವರಿಷ್ಠರು ಮುಂದಿನ ಹೆಜ್ಜೆಯಿಡುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ತಲೆದೋರಿದ್ದ ಎಲ್ಲ ಗೊಂದಲಗಳಿಗೂ ಬಸವರಾಜ ಬೊಮ್ಮಾಯಿ ಆಯ್ಕೆ ಮೂಲಕ ತೆರೆ ಎಳೆದಿರುವ ಬಿಜೆಪಿ ನಾಯಕರನ್ನು ಅಭಿನಂದಿಸುತ್ತೇವೆ. ಯಡಿಯೂರಪ್ಪ ಅವರು ಘೊಷಿಸಿ, ಆರಂಭಿಸಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿ ಸುವಂತೆ ನೂತನ ಮುಖ್ಯಮಂತ್ರಿಗಳಿಗೆ ಸಲಹೆ ನೀಡುತ್ತೇವೆ.
| ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಾಶೀ ಪೀಠದ ಜಗದ್ಗುರುಗಳು
ಯಡಿಯೂರಪ್ಪ ಅವರ ಅಖಾಡದಲ್ಲಿ ಬೆಳೆದಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ರಾಜ್ಯ ರಾಜಕೀಯದ ಅಸ್ಥಿರತೆ ಕೊನೆಯಾಗಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಅಸ್ಥಿರತೆ ವಿರುದ್ಧದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರಾಜಕೀಯ ಸ್ಥಿರತೆ ರಾಜ್ಯದಲ್ಲಿ ಶಾಶ್ವತವಾಗಿರಲು ಬೊಮ್ಮಾಯಿ ಶ್ರಮಿಸಲಿ.
| ಡಾ. ಶಿವಮೂರ್ತಿ ಮುರುಘಾಶರಣರು ಮುರುಘಾಮಠ, ಚಿತ್ರದುರ್ಗ