

ಕಾರವಾರ:ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಆರೋಗ್ಯಕರ ಒತ್ತಡ ವಿದ್ದಾಗ ಮಾತ್ರ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಹೇಳಿದರು.
ಜಿಲ್ಲೆಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಕಾರಿ(ಪಿಡಿಒ)ಗಳಿಗಾಗಿ ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆಯಿಂದ ನಗರದ ಕ್ರಿಮ್ಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಒತ್ತಡ ನಿವಾರಣೆ, ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡವಿಲ್ಲದೆ ಜೀವನ ಸಂಪೂರ್ಣ ಎನಿಸಿಕೊಳ್ಳುವುದಿಲ್ಲ. ಆದರೆ ಅತಿಯಾದ ಒತ್ತಡ ಆರೋಗ್ಯದ ನಿಯಂತ್ರಣ ಕಳೆದುಕೊಳ್ಳುತ್ತದೆ. ದಿನನಿತ್ಯದ ಕೆಲಸದ ಒತ್ತಡ ನಿವಾರಣೆ ಹಾಗೂ ಆರೋಗ್ಯದ ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಸಲಹೆ-ಸೂಚನೆಗಳಿವೆ. ಅಂತಹ ಪ್ರಮುಖ ಪರಿಹಾರ ಅಂಶಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಗಾರ ಹಮ್ಮಿಕೊಂಡಿದ್ದು, ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ರಿಮ್ಸ್ ಡೀನ್ ಡಾ.ಗಜಾನನ ನಾಯಕ, ವೈಯಕ್ತಿಕ ಜೀವನಕ್ಕೂ ಹಾಗೂ ವೃತ್ತಿ ಜೀವನವನ್ನು ವಿಭಿನ್ನವಾಗಿ ಅನುಭವಿಸುವ ಮೂಲಕ ನಿಮ್ಮ ಒತ್ತಡದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಬ್ಬರೂ ತಮ್ಮನ್ನು ತಾವು ಪ್ರೀತಿಸುವ ಮೂಲಕ ಒತ್ತಡವನ್ನು ದೂರ ಇಡಲು ಸಾಧ್ಯವಿದೆ ಎಂದರು.
ಇದನ್ನೂ ಓದಿ:ಅಭಿನಂದನೀಯರು ಯುವಕರಿಗೆ ಮಾದರಿ
ಕಾರ್ಯಕ್ರಮದ ನಂತರ ಆಯುಷ ಇಲಾಖೆಯ ಯೋಗ ತರಬೇತುದಾರರಾದ ಗಣಪತಿ ಹೆಗಡೆ ಅವರು ಮಾನಸಿಕ ಆರೋಗ್ಯಕ್ಕಾಗಿ ಯೋಗಾಸನ, ಕ್ರಿಮ್ಸ್ನ ಜನರಲ್ ಫಿಜಿಶಿಯನ್ ಡಾ. ಅಮಿತ್ ಕಾಮತ್ ಅವರು ಒತ್ತಡ ನಿರ್ವಹಣೆ ಮತ್ತು ಹೃದಯ ಸಂಬಂಧಿಸಿದ ಕಾಯಿಲೆ, ಜಿಮ್ ತರಬೇತುದಾರ ದೀಪಕ ಅವರು ದಿನನಿತ್ಯ ಸಾಮಾನ್ಯ ವ್ಯಾಯಾಮ ತರಬೇತಿ, ಶಿರಸಿಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ಅವರು ಆಯುರ್ವೇದದಲ್ಲಿ ಒತ್ತಡದ ನಿವಾರಣೆ, ಕ್ರಿಮ್ಸ್ನ ಮಾನೊರೋಗ ತಜ್ಞರಾದ ಡಾ. ವಿಜಯರಾಜ್, ಡಾ. ಅಕ್ಷಯ ಪಾಠಕ್, ಧ್ಯಾನ ಮತ್ತು ಆರೋಗ್ಯ, ಮುಂಡಗೋಡದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂಜೀವ್ ಗಲಗಲಿ ಅವರು ಧ್ಯಾನ ಮತ್ತು ಆರೋಗ್ಯ ವಿಷಯದ ಕುರಿತು ಮಾತನಾಡಿದರು.
ಜಿಪಂ ಉಪ ಕಾರ್ಯದರ್ಶಿಗಳಾದ ನಾಗೇಶ ರಾಯ್ಕರ, ಡಿ.ಎಂ. ಜಕ್ಕಪ್ಪಗೋಳ, ಮುಖ್ಯ ಲೆಕ್ಕಾಧಿಕಾರಿ ಸತೀಶ ಪವಾರ, ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್, ಯೋಜನಾ ನಿರ್ದೇಶಕ ಕರೀಂ ಅಸಾದಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಯು.ಎಚ್, ಲೆಕ್ಕಾಧಿಕಾರಿ ಆನಂದಸಾಬ್ ಹಬೀಬ, ಕ್ರಿಮ್ಸ್ನ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಕುಡ್ತಲಕರ್, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಶಂಕರ ರಾವ್ ಇದ್ದರು. ಡಾ. ಪ್ರಸನ್ನ ಎಸ್.ಕಾರ್ಯಕ್ರಮ ನಿರೂಪಿಸಿದರು.