

ಕೆ.ಆರ್.ಪ್ರಸಿನ್ ಹಾಸನ
ಮೊಸಳೆಹೊಸಳ್ಳಿ ಗಣಪತಿ ವಿಸರ್ಜನೆ ವೇಳೆ ಸಂಭವಿಸಿದ ದುರಂತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಬಿಲ್ ಪಾವತಿ ಮಾಡುವಂತೆ ಖಾಸಗಿ ಆಸ್ಪತ್ರೆಯಿಂದ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ದುರಂತ ಸಂಭವಿಸಿದ ತಕ್ಷಣ ನೆರೆದಿದ್ದವರು ಆಂಬುಲೆನ್ಸ್‌ಗಾಗಿ ಕಾಯದೆ ಸಿಕ್ಕ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ಒಂದಿಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಮೃತಪಟ್ಟಿದ್ದು, ಇನ್ನಿಬ್ಬರು ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರಂತ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಘಟನೆಯಲ್ಲಿ ಗಾಯಗೊಂಡು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದರು. ಆದರೆ, ಈಗ ಖಾಸಗಿ ಆಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದು, ಇವರಿಗೆ ಔಷಧಿಗೆ ಹಣ ಪಾವತಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಗಾಯಗೊಂಡವರ ಕುಟುಂಬಸ್ಥರು ತಿಳಿಸಿದ್ದಾರೆ. ಸರ್ಕಾರದಿಂದ ಹಣ ಭರಿಸುವುದಾಗಿ ಹೇಳಿದ್ದಾರೆ ಎಂದರೂ ಕೇಳದೆ ಜಿಲ್ಲಾಡಳಿತದಿಂದ ಪತ್ರ ಬರೆಸಿಕೊಂಡು ಬರುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
25 ಸಾವಿರ ಪಾವತಿ: ದುರಂತದಲ್ಲಿ ಮೊಸಳೆಹೊಸಳ್ಳಿ ಗ್ರಾಮದ ಋತ್ವಿಕ್ ಸ್ಪೈನಲ್ ಕಾರ್ಡ್‌ಗೆ ಏಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಋತ್ವಿಕ್ ಕುಟುಂಬದವರು ಈಗ್ಗಾಲೇ 25 ಸಾವಿರ ರೂ. ಪಾವತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಗ್ರಾಮದ ಆದರ್ಶ್ ಎಂಬುವರ ಮಂಡಿ ಚಿಪ್ಪಿಗೆ ತೀವ್ರ ಏಟು ಬಿದ್ದಿದ್ದು, ಸ್ಪೀಲ್ ಪ್ಲೇಟ್ ಅಳವಡಿಸಬೇಕೆಂದು ವೈದ್ಯರು ಹೇಳಿದ್ದಾರೆ. ಔಷಧಿ ತರುವ ಸಂದರ್ಭ ಆಸ್ಪತ್ರೆಯಲ್ಲಿ ಹಣಕ್ಕೆ ಒತ್ತಡ ಹಾಕುತ್ತಿದ್ದಾರೆ ಎಂದು ಆದರ್ಶ್‌ನ ಸಹೋದರ ಆಕಾಶ್ ವಿಜಯವಾಣಿಗೆ ತಿಳಿಸಿದರು.
ಎಬಿಆರ್‌ಕೆ ವರದಿ ನೀಡಲು ನಕಾರ: ದುರಂತದಲ್ಲಿ ಮಂಡಿಯ ಚಿಪ್ಪು ಕಳೆದುಕೊಂಡಿರುವ ಆದರ್ಶ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಹಿಮ್ಸ್‌ನಿಂದ ಎಬಿಆರ್‌ಕೆ ವರದಿ ತರುವಂತೆ ಸೂಚಿಸಿದ್ದು, ಹಿಮ್ಸ್ ಆಸ್ಪತ್ರೆಯ ಮೂಳೆ ತಜ್ಞರು ನಿಮ್ಮನ್ನು ಖಾಸಗಿ ಆಸ್ಪತ್ರೆಗೆ ತೆರಳಲು ಯಾರು ಹೇಳಿದ್ದು? ವರದಿ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಈಗ ನಾವು ಏನು ಮಾಡುವುದು ತಿಳಿಯುತ್ತಿಲ್ಲ ಎಂದು ಆದರ್ಶ್‌ನ ಸಹೋದರ ಆಕಾಶ್ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.
ತಹಸೀಲ್ದಾರ್ ಭೇಟಿ: ಬಿಲ್ ಪಾವತಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಖಾಸಗಿ ಆಸ್ಪತ್ರೆಗೆ ತಹಸೀಲ್ದಾರ್ ಗೀತಾ ಭೇಟಿ ನೀಡಿದ್ದು, ಆಸ್ಪತ್ರೆಯ ಆಡಳಿತ ಮಂಡಳಿ ಜತೆ ಚರ್ಚಿಸಿ ಸರ್ಕಾರದ ವತಿಯಿಂದ ಬಿಲ್ ಪಾವತಿಸಲು ಕ್ರಮವಹಿಸಲಾಗುವುದು. ಗಾಯಗೊಂಡವರಿಗೆ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗದಂತೆ ಸಮಾಲೋಚಿಸಿದ್ದಾರೆ. ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆ ನಡೆದಿದ್ದು, ಅಲ್ಲಿಯ ವೈದ್ಯರ ಜತೆ ಕೂಡ ಮಾತುಕತೆ ನಡೆಸಿದ್ದಾರೆ.
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ರವಾನೆ: ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಸಂಭವಿಸಿದ ದುರಂತದಲ್ಲಿ ಲಿವರ್‌ಗೆ ಏಟು ಬಿದ್ದಿದ್ದು, ಹಿಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕಾಶ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈತ ಮೊಸಳೆಹೊಸಳ್ಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ.
ಆರ್ಥಿಕ ನೆರವು
ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ.ಪರಿಹಾರ ಒದಗಿಸುವುದಾಗಿ ಹಾಗೂ ಗಾಯಗೊಂಡವರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿ ರೂ. ಪರಿಹಾರ ಘೋಷಿಸಲಾಗಿದೆ.
ಜೆಡಿಎಸ್ ಪಕ್ಷದಿಂದ ದುರಂತದಲ್ಲಿ ಮೃತಪಟ್ಟ 10 ಕುಟುಂಬಕ್ಕೆ ತಲಾ 1 ಲಕ್ಷ ರೂ. ಹಾಗೂ ಗಂಭೀರಗಾಯಾಳುಗಳಿಗೆ 25 ಸಾವಿರ ರೂ., ಮಧ್ಯಮ ಗಾಯಾಳುಗಳಿಗೆ 20 ಸಾವಿರ ರೂ. ಹಾಗೂ ಸಣ್ಣ-ಪುಟ್ಟ ನೋವಿನಿಂದ ಬಳಲುತ್ತಿರುವವರಿಗೆ 15 ಸಾವಿರ ರೂ. ಪರಿಹಾರ ನೀಡುವುದಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಘೋಷಿಸಿದ್ದಾರೆ. ಅಲ್ಲದೆ ಸಂಸದ ಶ್ರೇಯಶ್ ಎಂ ಪಟೇಲ್ ಮೃತಪಟ್ಟ ಕುಟುಂಬಕ್ಕೆ ತಲಾ ಒಂದು ಲಕ್ಷ ಹಾಗೂ ಗಾಯಗೊಂಡವರಿಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.