ಮದ್ಯದ ದರ ಇಳಿಕೆ ತಿಕ್ಕಾಟ:ಶುಲ್ಕಇಳಿಸದಂತೆ ತಯಾರಿಕ ಕಂಪನಿಗಳ ಒತ್ತಡ

01Drinks-WEb
Published on

ಬೆಂಗಳೂರು: ಪ್ರೀಮಿಯಂ ಮದ್ಯ ದರ ಇಳಿಕೆ ಸಂಬಂಧಪಟ್ಟಂತೆ ಸರ್ಕಾರ ಹಾಗೂ ಮದ್ಯ ತಯಾರಿಕ ಕಂಪನಿಗಳ ನಡುವೆ ತಿಕ್ಕಾಟ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ರಾಜ್ಯದಲ್ಲಿ 32ಗಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳಿವೆ. ಪ್ರತಿ ನಿತ್ಯ ಆಯಾ ಕಂಪನಿಗಳು ತಮ್ಮ ಬ್ರಾಂಡ್​ ಅಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಿ ಮದ್ಯ ಮಾರಾಟ ಮಾಡುತ್ತಿವೆ.ರಾಜ್ಯದಲ್ಲಿ ಮದ್ಯದ ಬ್ರಾಂಡ್ಗಳನ್ನು ಬೆಲೆಯ ಅನುಸಾರ 18 ಸ್ಲ್ಯಾಬ್​ಗಳಾಗಿ ವಿಗಂಡಿಸಲಾಗಿದೆ. 1ರಿಂದ 5ನೇ ಸ್ಲ್ಯಾಬ್​ವರೆಗಿನ ಮದ್ಯಗಳ ಮಾರಾಟದಿಂದ ಶೇ.75, ಆರರಿಂದ 12ನೇ ಸ್ಲ್ಯಾಬ್​ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳಿಂದ ಶೇ.20 ಹಾಗೂ 13ರಿಂದ 18ವರೆಗಿನ ಸ್ಲ್ಯಾಬ್​ಗಳ ಪ್ರೀಮಿಯಂ ವಿದೇಶಿ ಮದ್ಯಗಳಿಂದ ಶೇ.5ರಷ್ಟು ಆದಾಯ ಸರ್ಕಾರಕ್ಕೆ ಬರುತ್ತದೆ.

ನೆರೆಯ ರಾಜ್ಯಗಳಿಗೆ ಹೊಲಿಸಿದರೆ ರಾಜ್ಯದಲ್ಲಿ ಪ್ರೀಮಿಯಂ ಸ್ಲ್ಯಾಬ್​ ಮದ್ಯದ ದರ ದುಬಾರಿಯಾಗಿದೆ. ಈ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪೂರೈಕೆಯಾಗುತ್ತಿದೆ. ಗಡಿ ಭಾಗದ ಜಿಲ್ಲೆಗಳ ಜನರು, ನೆರೆಯ ರಾಜ್ಯಗಳಿಗೆ ತೆರಳಿ ಮದ್ಯ ಖರೀದಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ. ಮದ್ಯ ಮಾರಾಟ ಹೆಚ್ಚಿಸುವ ಮೂಲಕ ಆದಾಯ ಗಳಿಸುವ ಉದ್ದೇಶದಿಂದ ಸರ್ಕಾರ, ಹೆಚ್ಚುವರಿ ಅಬಕಾರಿ ತೆರಿಗೆ (ಇಎಡಿ) ದರ ಪರಿಷ್ಕರಣೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಲ್ಲಿನ ಮದ್ಯದ ದರಪಟ್ಟಿ ಆಧರಿಸಿ ಹೊಸದಾಗಿ ಬೆಲೆ ನಿಗದಿಪಡಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದೆ.

ಅಲ್ಲದೆ, ಈ ಅಧಿಸೂಚನೆಗೆ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ 7 ದಿನ ಕಾಲಾವಕಾಶ ನೀಡಿತ್ತು. ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಪ್ರೀಮಿಯಂ ದರ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸರ್ಕಾರ, ಈಗಾಗಲೇ ಅಬಕಾರಿ ಇಲಾಖೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು, ಹೊರ ರಾಜ್ಯಕ್ಕೆ ತೆರಳಿ ಅಧ್ಯಯನ ನಡೆಸಿ ವರದಿ ಕೊಟ್ಟಿದ್ದಾರೆ. ಹೀಗಾಗಿ, ವರದಿ ಆಧಾರದಲ್ಲಿ ಪ್ರೀಮಿಯಂ ಮದ್ಯ ದರ ಇಳಿಕೆಯಾಗಲಿದೆ. ಜು.1ರಿಂದಲೇ ಪ್ರೀಮಿಯಂ ಮದ್ಯ ದರ ಇಳಿಕೆಯಾಗಬೇಕಿತ್ತು. 16 ವಿವಿಧ ವರ್ಗಗಳ ಪ್ರೀಮಿಯಂ ಮದ್ಯದ ಮೇಲೆ ಕನಿಷ್ಠ 60 ರೂ.ನಿಂದ ಗರಿಷ್ಠ 150 ರೂ.ವರೆಗೆ ದರ ಇಳಿಕೆಯಾಗಬೇಕಿತ್ತು. ಆದರೆ, ಮದ್ಯ ತಯಾರಿಕ ಕಂಪನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಅಲ್ಲದೆ, ಪ್ರೀಮಿಯಂ ಮದ್ಯ ತಯಾರಿಕೆಗೆ ವೆಚ್ಚವಾಗುವ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರ, ಉತ್ಪಾದಕರಿಗೆ ಸೂಚಿಸಿತ್ತು. ಇದಕ್ಕೆ ಉತ್ಪಾದಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ (ಜು.12) ಸಂಜೆ 4ಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು, ಉತ್ಪಾದಕರ ಜತೆ ಸಭೆ ಇದೆ. ಈ ಸಭೆಯಲ್ಲಿ ಪ್ರೀಮಿಯಂ ಮದ್ಯ ದರ ಇಳಿಕೆಯಾಗುತ್ತದೆಯೇ ಅಥವಾ ಇಲ್ಲವೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net