'ಬಿಜೆಪಿ ಕಡೆಯಿಂದ ಒತ್ತಡ'

'Pressure from BJP'
Published on

ಮಡಿಕೇರಿ:

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವವರಲ್ಲಿ ಬಿಜೆಪಿ ಶಾಸಕರು ಮತ್ತು ಸಂಸದರ ಜತೆ ಹತ್ತಿರದ ಸಂಬAಧ ಹೊಂದಿರುವವರೂ ಇದ್ದಾರೆ. ಅವರ ಬೇನಾಮಿಯೂ ಆಗಿರುವ ಸಾಧ್ಯತೆ ಇದೆ. ಹಾಗಾಗಿ ಈ ಪ್ರಕರಣದಲ್ಲಿ ಅಲ್ಲಿಂದಲೂ ಒತ್ತಡ ಬಂದಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಬುಧವಾರ ವಿರಾಜಪೇಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ದರ್ಶನ ಒಬ್ಬ ಖ್ಯಾತ ನಟ. ಇದರಿಂದಾಗಿ ಎಲ್ಲಾ ವಲಯದಲ್ಲೂ ಅವರಿಗೆ ಪರಿಚಿತರು ಇದ್ದಾರೆ. ಈ ಸ್ನೇಹದ ಕಾರಣಕ್ಕೆ ಆರಂಭದ ದಿನಗಳಲ್ಲಿ ಪೊಲೀಸರಿಗೆ ಒತ್ತಡಗಳು ಇದ್ದವು. ಆದರೆ ಬೆಂಗಳೂರು ನಗರ ಪೊಲೀಸರು ಇದ್ಯಾವುದಕ್ಕೂ ಮಣಿಯದೇ ಉತ್ತಮ ತನಿಖೆ ನಡೆಸಿದ್ದಾರೆ. ಆರೋಪಿ ನಂ. 14 ಪ್ರದೋಶ್ ಎಂಬಾತ ಬಿಜೆಪಿ ಸಂಸದರು, ಶಾಸಕರ ಬೇನಾಮಿಯಾಗಿ ಕೆಲಸ ಮಾಡಿದ್ದಾರೆ. ಇದು ಕೂಡ ತನಿಖೆಯಲ್ಲಿ ಹೊರಬರಬೇಕಿದೆ.

ಚುನಾವಣೆ ಪ್ರಚಾರದಲ್ಲಿ ಅನೇಕರು ಪಾಲ್ಗೊಳ್ಳುತ್ತಾರೆ. ಹಾಗೆಯೇ ಕಾಂಗ್ರೆಸ್ ಪರ ದರ್ಶನ್ ಪ್ರಚಾರ ಮಾಡಿದ ಸಂದರ್ಭ ಅವರು ಆರೋಪಿ ಆಗಿರಲಿಲ್ಲ. ಹಾಗಾಗಿ ಈ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ಯಾಕೆಂದರೆ ಪ್ರಜ್ವಲ್ ರೇವಣ್ಣ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಹಾಸನದಲ್ಲಿ ಅವರಿಗೆ ಟಿಕೆಟ್ ಕೊಟ್ಟು ಖುದ್ದು ಪ್ರಧಾನಿಯೇ ಪ್ರಜ್ವಲ್ ಪರ ಪ್ರಚಾರ ಮಾಡಿದರು. ಪ್ರಜ್ವಲ್ ವಿರುದ್ಧ ಎಂಥ ಗಂಭೀರ ಆರೋಪ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಆರೋಪಿಗಳಿಗೆ ರಕ್ಷಣೆ ಕೊಡುವುದು, ಅವರ ಪರ ವಹಿಸುವುದು ಬಿಜೆಪಿ ಹುಟ್ಟುಹಾಕಿದ ಸಂಸ್ಕೃತಿ. ಈಗಲಾದರೂ ಬಿಜೆಪಿಯವರು ನ್ಯಾಯ ಹೊರಬರುವ ತನಕ ತನಿಖೆಗೆ ಸಹಕರಿಸಲಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net