

ಚಿಕ್ಕಬಳ್ಳಾಪುರ: ಒತ್ತಡದ ಆಡಳಿತ ವ್ಯವಸ್ಥೆಯ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಛೀಮಾರಿ ಹಾಕಿಸಿಕೊಳ್ಳುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಭಾಸ್ಕರ್ ರಾವ್ ವ್ಯಂಗ್ಯವಾಡಿದ್ದಾರೆ.
ಕೋಮು ನಿಗ್ರಹ ಪಡೆ ರಚನೆ ಘೋಷಿಸಿದ್ದರೂ ನಿಯಮಾನುಸಾರ ಆದೇಶ ಹೊರಡಿಸಿಲ್ಲ. ಮತ್ತೊಂದೆಡೆ ಅವಕಾಶವಿಲ್ಲದಿದ್ದರೂ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದವರ ಮೇಲಿನ ಪ್ರಕರಣಗಳನ್ನು ರದ್ದುಪಡಿಸಲು ತೀರ್ಮಾನ ಕೈಗೊಂಡಿರುವುದಕ್ಕೆ ನ್ಯಾಯಾಲಯವೇ ಛೀಮಾರಿ ಹಾಕಿದೆ. ಈಗ ಹಿಂದುತ್ವವಾದಿಗಳ ಗಡಿಪಾರಿನ ಆತುರಾತುರ ಕ್ರಮವನ್ನು ಅನುಸರಿಸಲಾಗುತ್ತಿದೆ. ಇದಕ್ಕೂ ಸರ್ಕಾರವೇ ತಲೆ ತಗ್ಗಿಸಬೇಕಾಗುತ್ತದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಹೆಚ್ಚಿನ ಬಹುಮತದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದೆ. ಇದರಿಂದ ಉತ್ತಮ ಆಡಳಿತ ನಿರ್ವಹಣೆಯ ಮೂಲಕ ಮೆಚ್ಚುಗೆಗೆ ಪಾತ್ರವಾಗುವುದನ್ನು ಬಿಟ್ಟು ಅವೈಜ್ಞಾನಿಕವಾಗಿ ತುಷ್ಟೀಕರಣದ ಕಾನೂನು ನಿಯಮಗಳನ್ನು ಜಾರಿಗೊಳಿಸುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮುಕ್ತ ಸ್ವಾತಂತ್ರ$್ಯವಿಲ್ಲ. ಮನಸ್ಸಿಗೆ ಬಂದಂತೆ ಪ್ರಕರಣಗಳನ್ನು ದಾಖಲಿಸಿ, ಕಿರುಕುಳ ನೀಡುವಂತಹುದಾಗುತ್ತಿದೆ ಎಂದಿದ್ದಾರೆ.
ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿಲ್ಲ. ಕ್ಷೇತ್ರಗಳಿಗೆ ಅನುದಾನವು ಬಿಡುಗಡೆಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ವಿ.ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಕೆ.ಮುರಳೀಧರ್, ಕೆ.ಬಿ.ಮುರಳಿ, ಮಧು ಸೂರ್ಯನಾರಾಯಣರೆಡ್ಡಿ, ರಾಷ್ಟ್ರೀಯ ಪರಿಷತ್ ಸದಸ್ಯ ಎ.ಬಿ.ಭೈರೇಗೌಡ, ಜಿಲ್ಲಾ ಕಾರ್ಯದರ್ಶಿ ಆರ್.ಎನ್.ಅಶೋಕ್, ಮಾಧ್ಯಮ ವಕ್ತಾರರಾದ ಶ್ರೀನಾಥ್, ವಿ.ಮಧುಚಂದ್ರ ಮತ್ತಿತರರು ಇದ್ದರು.