

ವಿಜಯವಾಣಿ ಸುದ್ದಿಜಾಲ ಉಡುಪಿ
ಬಿಜೆಪಿ ಬಂಡಾಯ ಅಭ್ಯರ್ಥಿಪರ ಪ್ರಚಾರ ನಡೆಸುತ್ತಿದ್ದೇನೆಂದು ಬಿಜೆಪಿಯಿಂದ ನನ್ನನ್ನು ಉಚ್ಛಾಟಿಸಿದ್ದು, ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ವಜಾಮಾಡಿದ್ದಾರೆ. ಇದನ್ನು ನಾನು ಸ್ವೀಕರಿಸಿದ್ದು, ಕೆ.ರಘುಪತಿ ಭಟ್ ಅವರನ್ನು ಬೆಂಬಲಿಸಿ, ಅವರ ಪರವಾಗಿಯೇ ಪ್ರಚಾರ ನಡೆಸುತ್ತೇನೆ ಎಂದು ಪ್ರಕಟಣೆ ಮೂಲಕ ಮಹೇಶ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ 23 ವರ್ಷದಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದು, ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆ.ರಘುಪತಿ ಭಟ್ ಅವರ ಮೂಲಕವೇ ರಾಜಕೀಯ ಪ್ರವೇಶಿಸಿದ್ದೇನೆ. ಮೇರು ಧುರೀಣ, ಪ್ರಾತ: ಸ್ಮರಣೀಯರೂ ಆದ ದಿ.ಡಾ ವಿ.ಎಸ್. ಆಚಾರ್ಯ ಅವರೂ ಸೇರಿದಂತೆ ಪಕ್ಷದ ಅನೇಕ ನಾಯಕರ ಮಾರ್ಗದರ್ಶನ, ಪ್ರೋತ್ಸಾಹದಿಂದ ಮೂರು ಬಾರಿ ನಗರಸಭಾ ಸದಸ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ನಗರಾಧ್ಯಕ್ಷ ಹಾಗೂ ಪ್ರಸ್ತುತ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನದ ವರೆಗೆ ವಿವಿಧ ಜವಾಬ್ದಾರಿ ನೀಡಿದ್ದಕ್ಕೆ ಅತ್ಯಂತ ಅಭಾರಿಯಾಗಿದ್ದೇನೆ.
ನನಗೆ ಪಕ್ಷ ಮತ್ತು ಮುಖಂಡರ ಶಿಫಾರಸಿನಂತೆ ನೀಡಿದ ಎಲ್ಲ ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ಶಿರಸಾ ವಹಿಸಿದ ಬಗ್ಗೆ ನನಗೆ ಅತೀವ ಸಂತೃಪ್ತಿ ಇದೆ. ಇದೀಗ ಪಕ್ಷ ತೆಗೆದುಕೊಂಡು ರ್ನಿಣಯದಂತೆ ನನ್ನನ್ನು ಉಚ್ಚಾಟನೆ ಮಾಡಿ, ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಿರುವುದನ್ನೂ ಅಷ್ಟೇ ವಿನಯವಾಗಿ ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಉಡುಪಿ: ನೈಋತ್ಯ ಪದವೀಧರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಜೊತೆ ಗುರುತಿಸಿಕೊಂಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಠಾಕೂರ್ ಸಹಿತ ನಾಲ್ವರು ಬಿಜೆಪಿ ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಠಾಕೂರ್, ಕಾಪು ಮಂಡಲ ಉಪಾಧ್ಯಕ್ಷ ಉಪೇಂದ್ರ ನಾಯಕ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರೋಶನ್ ಶೆಟ್ಟಿ ಮತ್ತು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜುನೈದ್ ಅವರು, ಬಂಡಾಯ ಅಭ್ಯರ್ಥಿಪರ ಮತ ಯಾಚಿಸುತ್ತಿರುವ ವಿಚಾರ ಪಕ್ಷದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ 48 ಗಂಟೆಗಳ ಒಳಗಾಗಿ ಸೃಷ್ಟೀಕರಣ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಕೆಲವರು ಉತ್ತರ ನೀಡಿದ್ದರೂ, ಅಸಮರ್ಪಕವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೂರು ಬಾರಿ ಉಡುಪಿ ಶಾಸಕರಾಗಿ ಅಪಾರ ಜನಮನ್ನಣೆ ಪಡೆದ ಕೆ.ರಘುಪತಿ ಭಟ್ ಅವರಿಗೆ ಪ್ರಸ್ತುತ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಟಿಕೆಟ್ ನೀಡದೆ ಬಿಜೆಪಿ ವಂಚಿಸಿದೆ. ಎರಡನೇ ಬಾರಿ ಪಕ್ಷದ ನಾಯಕರು ಅವರಿಗೆ ಅನ್ಯಾಯ ಮಾಡಿರುವುದು ಅತ್ಯಂತ ವಿಷಾದನೀಯ. ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನ ತುಂಬ ಆಘಾತಕಾರಿಯಾಗಿದೆ. ಇದನ್ನು ಕೂಡಲೇ ಸರಿಪಡಿಸಿಕೊಳ್ಳದಿದ್ದಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿ ತಪ್ಪಿದ್ದಲ್ಲ. ಮಹೇಶ್ ಠಾಕೂರ್. ವಜಾಗೊಂಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ