

ವಿಜಯವಾಣಿ ಸುದ್ದಿಜಾಲ ಉಡುಪಿ
ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ, ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಸೇಂಟ್ ಲಾರೆನ್ಸ್ ಚರ್ಚ್ನವರು ಅಕ್ರಮವಾಗಿ ಬೃಹತ್ ಸ್ವಾಗತ ಗೋಪುರ ರಚಿಸಿದ್ದಾರೆ. ಮುಂದಿನ 10 ದಿನದೊಳಗೆ ಜಿಲ್ಲಾಡಳಿತ ಅದನ್ನು ತೆರವು ಮಾಡದಿದ್ದಲ್ಲಿ ಜಿಲ್ಲಾದ್ಯಂತ ಜನಾಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಕಾರ್ಕಳ ತಾಲೂಕಿನ ಹಿಂದು ಹಿತರಕ್ಷಣಾ ವೇದಿಕೆ ಸದಸ್ಯ ಶ್ರೀಕಾಂತ ಶೆಟ್ಟಿ ಎಚ್ಚರಿಕೆ ನೀಡಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಸ್ಥಳದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಎಲ್ಲ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ 2008ರಲ್ಲಿಯೇ ಆದೇಶ ಮಾಡಿದೆ. ಈ ವಿಚಾರ ಜಿಲ್ಲೆಯ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಯಾರದೋ ಪ್ರಭಾವಕ್ಕೆ ಒಳಗಾಗಿ ಗೋಪುರ ನಿರ್ಮಿಸಲು ಅನುಮತಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯವರಂತೂ ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿದರು.
ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರ ನೀಡಿ ಹಿಂದು ಧಮೀರ್ಯರು ಸರ್ಕಾರಿ ಜಾಗದಲ್ಲಿರುವ ಕಟ್ಟಡ ತೆರವು ಮಾಡಿ ಸ್ಪಂದಿಸಿದ್ದಾರೆ. ಆದರೆ, ಕಾರ್ಕಳದ ಚರ್ಚ್ನವರಿಗೇಕೆ ಅಷ್ಟೊಂದು ಅಕ್ಕರೆ ತೋರುತ್ತಿದ್ದೀರಿ? ಈಗಾಗಲೇ ಕೆಡವಿರುವ ಜಾಗದಲ್ಲಿ ಹಿಂದುಗಳಿಗೂ ಮತ್ತೆ ಕಟ್ಟಡ ಅಥವಾ ಗೋಪುರ ನಿರ್ಮಿಸಿಕೊಳ್ಳಲು ಅವಕಾಶ ಕೊಡಿ. ಇಲ್ಲವೇ ಅಕ್ರಮವಾಗಿ ನಿರ್ಮಿಸಿರುವ ಚರ್ಚ್ನವರ ಸ್ವಾಗತ ಗೋಪುರ ತೆರವು ಮಾಡಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತಿಲಕ್ ಸಾಣೂರು, ರಮೇಶ್ ಶೆಟ್ಟಿ, ನಿಖಿಲ್ ಮಂಚಿ, ಧೀರಜ್ ಬನ್ನಂಜೆ, ಗುರುಪ್ರಸಾದ್ ಇದ್ದರು.
ಸರ್ಕಾರಿ ಜಾಗದಲ್ಲಿ ಚರ್ಚ್ನವರು ಅಕ್ರಮವಾಗಿ ಕಟ್ಟಿರುವ ಸ್ವಾಗತ ಗೋಪುರ ತೆರವು ಮಾಡಬೇಕಾದ ಜವಾಬ್ದಾರಿ ಜಿಲ್ಲಾಧಿಕಾರಿಯದ್ದಾಗಿದ್ದು, ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಚರ್ಚ್ನವರ ಅಕ್ರಮಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಡಿಸಿ ವಿರುದ್ಧವೇ ಪ್ರತಿಭಟಿಸಬೇಕಾಗುತ್ತದೆ. ತಿಲಕ್ ಸಾಣೂರು. ಅಧ್ಯಕ್ಷ, ಹಿಂದು ಹಿತರಕ್ಷಣಾ ವೇದಿಕೆ, ಕಾರ್ಕಳ