ದೇವಸ್ಥಾನಕ್ಕೆ ನಯಾಪೈಸೆ ನೀಡದವರಿಂದ ಅಪಪ್ರಚಾರ - ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಸ್ಪಷ್ಟನೆ

Published on

ಪುತ್ತೂರು: ಎ ಗ್ರೇಡ್ ದೇವಸ್ಥಾನದ ಸೇವಾ ಶುಲ್ಕ ಹೆಚ್ಚು ಮಾಡಿರುವುದು, ಸುಮಾರು ೧೫ ವರ್ಷದ ಬಳಿಕದ ನಿರ್ಧಾರ. ದೇವಸ್ಥಾನದ ಹಣ ಮುಸ್ಲಿಮರ ಕಲ್ಯಾಣಕ್ಕೆ ಹೋಗುತ್ತಿದೆ ಎಂದು ಬಿಜೆಪಿಯವರು ತಪ್ಪು ಸಂದೇಶ ಹರಡುತ್ತಿದ್ದು, ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಸಿದ್ಧರಾಗಿದ್ದೇವೆ. ದೇವಸ್ಥಾನಕ್ಕೆ ನಯಾಪೈಸೆ ನೀಡದವರು ಅಪಪ್ರಚಾರ ಮಾಡುತ್ತಿದ್ದಾರೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಹೇಳಿದರು.

ಸುಬ್ರಹ್ಮಣ್ಯ ಹಾಗೂ ಕಟೀಲು ದೇವಸ್ಥಾನದಲ್ಲಿ ದರ ಏರಿಕೆ ಮಾಡಿರುವುದರ ಹಿಂದೆ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ಕಟೀಲು ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನವಲ್ಲ. ದರ ಏರಿಕೆ ನಿರ್ಧಾರಗಳು ಆಡಳಿತ ಮಂಡಳಿಯ ನಿರ್ಧಾರವಾಗಿದ್ದು, ಸರ್ಕಾರ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ೧೫ ವರ್ಷಗಳಿಂದ ಮಾರುಕಟ್ಟೆಯಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ತೆಂಗಿನಕಾಯಿ ದರದಲ್ಲಿ ಗಣನೀಯ ಏರಿಕೆಯಾಗಿದೆ. ದೇವಸ್ಥಾನ ದಿನನಿತ್ಯದ ಖರ್ಚುಗಳನ್ನು ಹೊಂದಾಣಿಕೆ ಮಾಡಲು ಸೇವೆಗಳನ್ನು ಮಾಡಲಾಗುತ್ತದೆ. ಸೇವೆಯನ್ನು ಕಡಿಮೆ ದರದಲ್ಲಿ ನೀಡಿದರೆ, ದೇವಸ್ಥಾನವನ್ನು ಹೇಗೆ ಮುನ್ನಡೆಸುವುದೆಂಬ ಪ್ರಶ್ನೆ ಉದ್ಬವಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಸ್ತಿಕ್ ಹಲವು ಬಾರಿ ಏರಿಸುವ ಕಾರ್ಯ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ೧೦ ಲಕ್ಷದ ಒಳಗೆ ಉಳಿಕೆಯಾದರೆ ಶೇ.೫ ಹಾಗೂ ಮೇಲ್ಪಟ್ಟು ಉಳಿಕೆಯಾದಲ್ಲಿ ಶೇ.೧೦ ಧಾರ್ಮಿಕ ಪರಿಷತ್ತಿನ ಕಮಿಷನರ್ ನೇತೃತ್ವದ ಸಾಮಾನ್ಯ ಸಂಘಟನಾ ನಿಽಗೆ ವರ್ಗಾವಣೆಯಾಗುತ್ತದೆ. ಶೇ.೯೦ ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಭಕ್ತರನ್ನು ಒತ್ತಾಯಿಸಿ ಸೇವೆ ಮಾಡುವ ಕಾರ್ಯಗಳು ನಡೆಯುವುದಿಲ್ಲ. ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ವಿವಿಧ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಎ. ಕೆ. ಜಯರಾಮ, ಸುಬ್ರಹ್ಮಣ್ಯ ಗೌಡ, ಸುಭಾಷ್ ರೈ ಬೆಳ್ಳಿಪ್ಪಾಡಿ, ಬಾಲಕೃಷ್ಣ ಕಣ್ಣಾರಾಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net