ಪುತ್ತೂರು: ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಆತಿಥ್ಯದಲ್ಲಿ ಮೈಸೂರು ವಿಭಾಗೀಯಮಟ್ಟದ ೧೪ ಮತ್ತು ೧೭ರ ವಯೋಮಾನದ ಬಾಲಕ, ಬಾಲಕಿಯರ ಕಬಡ್ಡಿ ಟೂರ್ನಿ ೨೦೨೫ ಸೆ.೨೭, ೨೮ರಂದು ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಽಕಾರಿ ವಿಷ್ಣುಪ್ರಸಾದ್ ಹೇಳಿದರು.
೮ ಜಿಲ್ಲೆಗಳ ತಂಡಗಳು ಭಾಗವಹಿಸಲಿದ್ದು, ಪ್ರತಿ ಜಿಲ್ಲೆಯಿಂದ ತಲಾ ನಾಲ್ಕು ತಂಡಗಳು ಭಾಗವಹಿಸಲಿವೆ. ೨೬ರಂದು ರಾತ್ರಿ ತಂಡಗಳು ಆಗಮಿಸಬೇಕಾಗಿದ್ದು, ವಸತಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ೨೭ರಂದು ಬೆಳಗ್ಗೆ ೯ರಿಂದ ಕ್ರೀಡಾಂಗಣಕ್ಕೆ ಜಾನಪದ ತಂಡಗಳ ಮೂಲಕ ಕ್ರೀಡಾಪಟುಗಳ ಮೆರವಣಿಗೆ ನಡೆದು, ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ೨೮ರಂದು ಸಮಾರೋಪ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯೋಜನಾ ಸಮಿತಿ ಸಂಚಾಲಕ ಕೇಶವ ಅಮೈ ಮಾತನಾಡಿ, ೨೭ರಂದು ಸಂಜೆ ೬ ಗಂಟೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಸುಮಾರು ೧೦ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರಾತ್ರಿ ೮.೩೦ಕ್ಕೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸತೀಶ್ ಭಟ್ಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೨೮ರಂದು ಸಂಜೆ ಚುರುಮುರಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ, ಮುಖ್ಯ ಶಿಕ್ಷಕ ಸತೀಶ್ ಭಟ್, ಪಿಡಬ್ಲ್ಯುಡಿ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ. ಉಪಸ್ಥಿತರಿದ್ದರು.