ಅರಣ್ಯ ವ್ಯಾಪ್ತಿಯಿಂದ ಕೃಷಿ ಜಮೀನಿಗೆ ಮುಕ್ತಿ : ನಿರ್ಮಾಣ ಕಾರ್ಮಿಕ ಸಂಘ ಗೌರವಾಧ್ಯಕ್ಷ ಕೆ.ಪಿ.ಮೋಹನ್ ಮನವಿ

Published on

ಕಡಬ: ವಿಸ್ತರಿತ ಅರಣ್ಯ ಜಮೀನಿನಲ್ಲಿ ಸೇರಿಕೊಂಡಿರುವ ಕೃಷಿ ಜಮೀನನ್ನು ಕೈಬಿಟ್ಟು ಅರಣ್ಯ ಹಾಗೂ ಕಂದಾಯ ಜಮೀನನ್ನು ಪ್ರತ್ಯೇಕಿಸಿ ಆಯಾ ಇಲಾಖೆ ಹೆಸರಿಗೆ ಪಹಣಿ ಪತ್ರ ತಯಾರಿಸಬೇಕು. ಅನಾದಿ ಕಾಲದಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ಕೃಷಿಕರಿಗೆ ನ್ಯಾಯ ಒದಗಿಸಿಕೊಡಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಡಬ ತಾಲೂಕು ಇತರ ನಿರ್ಮಾಣ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಕೆ.ಪಿ.ಮೋಹನ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಕಂದಾಯ ಭೂಮಿಯ ಹೆಚ್ಚುವರಿ ಜಮೀನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎನ್ನುವ ಕಾನೂನು ಜಾರಿ ಮಾಡಿದಾಗ ಅಧಿಕಾರಿಗಳು ಸ್ಥಳಕ್ಕೆ ತೆರಳದೆ ಎಲ್ಲೋ ಗ್ರಾ.ಪಂ ಕಚೇರಿಯಲ್ಲಿ ಕುಳಿತು ಅಂದಾಜಿಗೆ ನಕ್ಷೆ ಮಾಡಿ ಇಡೀ ರಾಜ್ಯದ ಸರ್ವೇ ನಾಲ್ಕು ವರ್ಷದಲ್ಲಿ ಮುಗಿಸಿ ಸಮಸ್ಯೆ ತಂದೊಡ್ಡಿದಾರೆ. ಇದರಿಂದ ಕೃಷಿಕರಿಗೆ ತೊಂದರೆಯಾಗಿದೆ. ಕೃಷಿಕರ ಜಾಗವೂ ಅರಣ್ಯ ಪ್ರದೇಶದ ಒಳಗೆ ಸೇರುವಂತಾಗಿ ಅಕ್ರಮ-ಸಕ್ರಮದಲ್ಲಿ ಭೂಮಿ ಮಂಜೂರಾತಿಯಾದರೂ ಅಧಿಕಾರಿಗಳು ಹಕ್ಕುಪತ್ರ ನೀಡುತ್ತಿಲ್ಲ. ಯಾರೋ ಅಧಿಕಾರಿಗಳು ಮಾಡಿದ ತಪ್ಪಿಗೆ ಕೃಷಿಕರು ಶಿಕ್ಷೆ ಅನುಭವಿಸುವಂತಾಗಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಈ ಸಮಸ್ಯೆ ಪರಿಹರಿಸಬೇಕಾಗಿದೆ ಎಂದರು.

ಸಾವಿರಾರು ಕುಟುಂಬ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಇವೆ. ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಸೇರಿದ ಜಮೀನನ್ನು ಅಳತೆ ಮತ್ತು ಗಡಿ ಗುರುತು ಮಾಡಿ ಆಯಾ ಇಲಾಖೆ ಹೆಸರಿಗೆ ಪಹಣಿ ಪತ್ರ ತಯಾರಿಸಬೇಕು. ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ನೀಡಿ ಕಂದಾಯ ಇಲಾಖೆಯಿಂದ ಹಕ್ಕುಪತ್ರ ದೊರಕುವಂತೆ ಮಾಡಬೇಕು. ಈ ಬಗ್ಗೆ ಜುಲೈ 23ರಂದು ಸಂತ್ರಸ್ತ ಕೃಷಿಕರ ಸಭೆ ನಡೆಸಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ, ಶ್ರಮಿಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘ ಅಧ್ಯಕ್ಷ ಶಿವಶಂಕರ್ ಬಿಳಿನೆಲೆ, ಮುಖಂಡ ವಿಕ್ಟರ್ ಮರ‌್ಟಿಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net