ಅನುಮಾನಕ್ಕೆ ಕಾರಣವಾಗುತ್ತಿದೆ ಶಾಸಕರ ಮೌನ -  ಪೆರುವಾಯಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹೇಳಿಕೆ

Published on

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈಯವರ ಕಾಲಬುಡದಲ್ಲಿ ಅವರ ಪಕ್ಷದವರು ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದರೂ ಶಾಸಕರು ಈ ಕುರಿತು ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆಮಾಡಿದೆ ಎಂದು ಪೆರುವಾಯಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹೇಳಿದರು.

ನೆಫೀಸಾ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದು, ಪುತ್ತೂರು ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸರ್ಕಾರದ ಕೆಲವು ಅನುದಾನ ಮಂಜೂರಾತಿಗೆ ಪುತ್ತೂರು ಶಾಸಕರ ಶಿಫಾರಸು ಪತ್ರ ಪಡೆದು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಮಂಜೂರು ಮಾಡಿಸುವುದು, ೯೪ಸಿ ಹಕ್ಕುಪತ್ರ ಕೊಡಿಸುವುದು, ಕೆಂಪುಕಲ್ಲಿನ ಗಣಿಗಾರಿಕೆ ಅಲ್ಲದೆ ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಹಣ ಪಡೆಯುತ್ತಿರುವ ಆರೋಪ ಕೂಡ ಅವರ ಮೇಲೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿದರು.

ಪುಣಚ ಶಕ್ತಿಕೇಂದ್ರ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಮಾತನಾಡಿ, ಲಂಚ ಪ್ರಕರಣದ ಆರೋಪಿ, ಗ್ರಾಪಂ ಅಧ್ಯಕ್ಷೆ ನಫೀಸಾ ನೈತಿಕತೆ ಇದ್ದರೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಪಕ್ಷದಿಂದಲೂ ಅವರನ್ನು ವಜಾ ಮಾಡಬೇಕು. ಪಂಚಾಯಿತಿಯಲ್ಲಿ ಅಧ್ಯಕ್ಷರಿಲ್ಲದೆ ಜನಸಾಮಾನ್ಯರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಪೆರುವಾಯಿ ಗ್ರಾಪಂ ಉಪಾಧ್ಯಕ್ಷೆ ಲಲಿತಾ ಆಚಾರ್ಯ, ಪೆರುವಾಯಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗೋಪಾಲ ಕೆ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net