ವಿಟ್ಲ: ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ೨೦೨೪-೨೫ನೇ ಸಾಲಿನಲ್ಲಿ ೨೧೩.೧೮ ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ೧.೩೮ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ಘೋಷಿಸಿದ್ದು, ಆ.೩೧ರಂದು ಬೆಳಗ್ಗೆ ೧೧ಕ್ಕೆ ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗ ಮಂದಿರದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನರಸಪ್ಪ ಪೂಜಾರಿ ಎನ್. ಹೇಳಿದರು.
೨೦೨೪-೨೫ನೇ ಸಾಲಿನಲ್ಲಿ ೧೩೩ ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, ೩೯.೪೪ ಲಕ್ಷ ರೂ. ಪಾಲು ಬಂಡವಾಳ ಜಮೆಯಾಗಿದೆ. ೫೪೩೦ ಎ ತರಗತಿ ಸದಸ್ಯರಿದ್ದು, ೩.೯೩ ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ೩೬.೦೭ ಕೋಟಿ ಠೇವಣಾತಿ ಹೊಂದಿ ಶೇ.೧೩.೨೯ ಹೆಚ್ಚಳವಾಗಿದೆ. ಸಂಘದ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ೩೬.೦೯ ಕೋಟಿ ರೂ. ಸಾಲ ನೀಡಿದ್ದು, ಶೇ.೯೫.೨೩ರಷ್ಟು ವಸೂಲಾತಿ ಮಾಡಲಾಗಿದೆ. ಆಹಾರ ಧಾನ್ಯ, ಸೀಮೆಎಣ್ಣೆ, ಕೊಂಕಣ ಗ್ಯಾಸ್, ರಾಸಾಯನಿಕ ಗೊಬ್ಬರ, ಕೀಟನಾಶಕಗಳು ೫೬.೮೬ ಲಕ್ಷ ರೂ. ಮೌಲ್ಯದ್ದು ಮಾರಾಟವಾಗಿದ್ದು, ೫.೦೬ ಲಕ್ಷ ರೂ. ಲಾಭ ಬಂದಿದೆ. ರೈತ ಸದಸ್ಯರಿಗೆ ಶೇ.೧೦ ರಿಯಾಯಿತಿಯಲ್ಲಿ ೨೫ ಕೆ.ಜಿ.ವರೆಗೆ ಮೈಲುತುತ್ತು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಂಘ ವ್ಯವಹಾರದ ಪ್ರಗತಿಯನ್ನು ಗುರುತಿಸಿ ನಾಲ್ಕು ಬಾರಿ ಪ್ರಶಸ್ತಿ ಪಡೆದುಕೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ಮಾತನಾಡಿ, ಹಳೆಯ ಗೋದಾಮನ್ನು ನವೀಕರಣ ಮಾಡಲಾಗಿದೆ. ಬೆಳೆ ವಿಮೆ, ಯಶಸ್ವಿನಿ ಆರೋಗ್ಯ ವಿಮೆ ಸೌಲಭ್ಯವನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ಶೇ.೮೦ಕ್ಕಿಂತ ಅಽಕ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಹಾಸಭೆಯಲ್ಲಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕರಾದ ಮಹಾಬಲೇಶ್ವರ ಭಟ್ ಎ., ಉದಯ ಕುಮಾರ್ ಎನ್., ಸದಾನಂದ ಗೌಡ ಸೇರಾಜೆ, ಮೋಹನದಾಸ ಉಕ್ಕುಡ, ರಾಘವೇಂದ್ರ ಪೈ ಎ., ದಿನೇಶ ಕೆ., ಸಂಧ್ಯಾ ಮೋಹನ, ವಾಸು ಸಿ. ಎಚ್., ಹರೀಶ್ ನಾಯ್ಕ, ತೀರ್ಥರಾಮ ಉಪಸ್ಥಿತರಿದ್ದರು.