ಪುತ್ತೂರು: ಧರ್ಮಸ್ಥಳದ ವಿಚಾರವನ್ನು ಮಸೀದಿಗೂ ಚರ್ಚ್‌ಗೂ ಹೋಲಿಕೆ ಮಾಡಿರುವುದು ಸರಿಯಲ್ಲ. ಈ ಸಮುದಾಯದಲ್ಲಿ ಯಾರೂ ದೇಹವನ್ನು ಕಾಡಿನಲ್ಲಿ, ಸಿಕ್ಕ ಸಿಕ್ಕಲ್ಲಿ ಹೂಳುವುದಿಲ್ಲ. ಮಸೀದಿ, ಚರ್ಚ್‌ನಲ್ಲಿ ಕಾನೂನು ಬದ್ಧವಾದ ದಫನ ಭೂಮಿಗಳಿದ್ದು, ಅಲ್ಲಿ ದಫನವಾಗಿರುವುದಕ್ಕೆ ದಾಖಲೆಗಳಿವೆ. ಜನಾರ್ದನ ಪೂಜಾರಿ ಯಾಕೆ ಬಿಜೆಪಿ, ಸಂಘ ಪರಿವಾರದ ದಾಟಿಯಲ್ಲಿ ಮಾತನಾಡಬೇಕು. ಧರ್ಮಸ್ಥಳ ವಿಚಾರದಲ್ಲಿ ಜನಾರ್ದನ ಪೂಜಾರಿಯವರು ನೀಡಿದ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತರುವ ವಿಚಾರ ಎಂದು ಕಾಂಗ್ರೆಸ್ ನಗರ ಅಧ್ಯಕ್ಷ ಮಹಮ್ಮದ್ ಆಲಿ ತಿಳಿಸಿದರು.
ಪೂಜಾರಿಯವರು ೯ ಸಲ ಚುನಾವಣೆ ಎದುರಿಸಿದಾಗ ಮುಸ್ಲಿಮರು, ಕ್ರೈಸ್ತರು ಬೆಂಬಲವಾಗಿ ನಿಂತಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ಮುಸ್ಲಿಮರಿದ್ದಾರೆ. ಅಲ್ಲಿಯ ಬಗ್ಗೆ ಮುಸ್ಲಿಮರು ಚಕಾರ ಎತ್ತಿಲ್ಲ. ಸೌಜನ್ಯಾ, ಪದ್ಮಲತಾ, ವೇದವಲ್ಲಿ ಪ್ರಕರಣದಲ್ಲಿ ಮುಸ್ಲಿಂ ಸಮಾಜದ ಪ್ರತಿನಿಽಗಳು ಮಾತನಾಡಿದ್ದು ಇದೆಯೇ? ಘಟನೆ ಸತ್ಯವೋ ಸುಳ್ಳೋ ಅದು ನಮಗೆ ಗೊತ್ತಿಲ್ಲ ಮತ್ತು ಆ ವಿವಾದದಲ್ಲಿ ಮುಸ್ಮಿಮರು, ಕ್ರೈಸ್ತರಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂದು ಮಾತನಾಡಿದ ಏಕೈಕ ವ್ಯಕ್ತಿ ಜನಾರ್ದನ ಪೂಜಾರಿ. ಅವರಿಗೇ ಮುತ್ತಿಗೆ ಹಾಕಿ ಹಲ್ಲೆಗೆ ಒಳಗಾಗುವ ಹಂತಕ್ಕೆ ಪರಿಸ್ಥಿತಿ ಬಂದಿತ್ತು. ಇಷ್ಟರವರೆಗೆ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕ ಅಲ್ಲಿಯ ಬಗ್ಗೆ ಮಾತನಾಡಿಲ್ಲ. ಎಡಬಿಡಂಗಿತನ ಹೇಳಿಕೆಯಿಂದ ಅವರು ಸೋಲುವ ಹಾಗೆ ಆಗಿದ್ದು, ಕಾಂಗ್ರೆಸ್ ನೆಲ ಕಚ್ಚಲು ಜನಾರ್ದನ ಪೂಜಾರಿ ಕಾರಣ. ಅಽಕಾರ ಕಳೆದುಕೊಂಡ ಬಳಿಕ ಮತಿಭ್ರಮಣೆಗೆ ಒಳಗಾಗಿದ್ದಾರಾ? ಕೋಮು ಗಲಭೆ ಸೃಷ್ಟಿಸುವ ಹುನ್ನಾರವಾ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಮೌರೀಸ್ ಮಸ್ಕರೇನಿಯಸ್, ಪ್ರಧಾನ ಕಾರ್ಯದರ್ಶಿ ರಶೀದ್ ಮುರ, ಸಂಘಟನಾ ಕಾರ್ಯದರ್ಶಿ ವಾಲ್ಟರ್ ಸ್ವಿಕೇರಾ, ನಗರ ಸಭೆ ಸದಸ್ಯ ರಿಯಾಝ್ ಪರ್ಲಡ್ಕ ಉಪಸ್ಥಿತರಿದ್ದರು.