

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿ ಜನರ ಒಗ್ಗಟ್ಟು ಒಡೆಯುವುದೇ ಭೂಸ್ವಾಧೀನ ಪರ ತಂಡದ ದುರುದ್ದೇಶವಾಗಿದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ಆರೋಪಿಸಿದ್ದಾರೆ.
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಶನಿವಾರ ಹೋರಾಟ ಸಮಿತಿ ಸದಸ್ಯರೊಂದಿಗೆ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು. 1195 ದಿನಗಳಿಂದ ಬಲವಂತದ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಅಂತಿಮ ಹಂತ ತಲುಪಿದ್ದು, ಜು.15 ರಂದು ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಈ ಮಧ್ಯೆ, ದೇವನಹಳ್ಳಿ ಸ್ಥಳೀಯ ಮುಖಂಡರು ಭೂಸ್ವಾಧೀನ ಪರವಾಗಿದ್ದೇವೆ ಎಂಬಂತೆ ಬಿಂಬಿಸಲು ಹೊರಟಿರುವುದು ನೈಜ ಹೋರಾಟಗಾರರ ಆತಂಕಕ್ಕೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹೊಲದಲ್ಲಿ ಬೆವರು ಸುರಿಸಿ ದುಡಿಯುವ ಜನರು ಇಲ್ಲಿದ್ದಾರೆ. ಆದರೆ, ಭೂಮಿ ಮಾರುವವರು ಮತ್ತು ಮಧ್ಯವರ್ತಿಗಳು ಬೆಂಗಳೂರಿನಲ್ಲಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.
ಸರ್ಕಾರವೇ ಕಾರಣ: ಹೋರಾಟ ನಿರ್ಣಾಯಕ ಹಂತ ತಲುಪಿರುವಾಗ ಈ ರೀತಿ ಪ್ರಚೋದನೆಗೆ ಸರ್ಕಾರವೇ ನೇರ ಕಾರಣ. ಜೂ.25 ರ ದೇವನಹಳ್ಳಿ ಹೋರಾಟದ ಬಳಿಕ ಹೋರಾಟ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. 4 ರಂದು ನಡೆದ ಸಭೆಯ ಬಳಿಕ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳಲು 10 ದಿನ ಸಮಯ ಕೇಳಿದ್ದರು, ಡಿನೋಟಿಫೈ ಮಾಡಲು ಕಾನೂನು ತೊಡಕಿದೆ ಎಂದು ಹೇಳಿದ್ದರು. ಹೀಗೆ ಹೇಳಿದ ಬಳಿಕ ಸರ್ಕಾರ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಾರಹಳ್ಳಿ ಶ್ರೀನಿವಾಸ್ ಆಕ್ರೋಶ ಹೊರಹಾಕಿದರು.
ಮಧ್ಯವರ್ತಿಗಳಿಗೆ ಹಳದಿವಲಯ ಬೇಕು: ಎಸ್‌ಸಿ-ಎಸ್‌ಟಿ ಸಮುದಾಯವನ್ನು ಮುಂದೆ ಇಟ್ಟುಕೊಂಡು ಭೂಮಿ ಕೊಡುತ್ತಾರೆ ಎಂದು ಮಾರಾಟ ಮಾಡಿಸುವ ಮಧ್ಯವರ್ತಿಗಳು ಸುಳ್ಳು ಹೇಳುತ್ತಿದ್ದಾರೆ. ಎಲ್ಲ ದಲಿತರೂ ಭೂಮಿ ಕೊಡುತ್ತಾರೆ ಎಂಬ ಮಧ್ಯವರ್ತಿಗಳ ಆರೋಪ ನಿಜವಲ್ಲ. ಹೊಲದಲ್ಲಿ ದುಡಿಯುವ ಎಲ್ಲ ಹಿಂದುಳಿದ ಜಾತಿ ಜನರೂ ಇಲ್ಲಿದ್ದಾರೆ, ಅವರೆಲ್ಲರೂ ಭೂಮಿ ಕೊಡುವುದಿಲ್ಲ ಎಂದು ಹೋರಾಟ ನಡೆಸುತ್ತಿದ್ದಾರೆ. ನಮ್ಮ ಒಗ್ಗಟ್ಟು ಮುರಿಯಲು ಜಗಳ ತಂದಿಡಲು ಯತ್ನಿಸುತ್ತಿದ್ದಾರೆ. ಹಸಿರು ವಲಯ ಎಂದು ಹೇಳಿ ಭಯ ಹುಟ್ಟಿಸುತ್ತಿದ್ದಾರೆ. ಜಮೀನು ಮಾರಾಟ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ರೈತರು ಇಷ್ಟು ದಿನದಿಂದ ಹೋರಾಟ ಮಾಡುತ್ತಿದ್ದಾರೆ. ನಿಜವಾದ ರೈತರಿಗೆ ಹಸಿರು ವಲಯವೇ ಬೇಕು. ಮಧ್ಯವರ್ತಿಗಳು ಮಾತ್ರ ಹಳದಿ ವಲಯ ಕೇಳುತ್ತಿದ್ದಾರೆ ಎಂದರು.
ರಾಷ್ಟ್ರಮಟ್ಟದಲ್ಲಿ ಚಳುವಳಿ ಎಚ್ಚರಿಕೆ: ಈಗ ಭೂಸ್ವಾಧೀನ ಪರವಾಗಿ ಮಾತನಾಡುತ್ತಿರುವವರಿಗೆ ನಮ್ಮನ್ನು ನೇರವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ, ಮೂರೂವರೆ ವರ್ಷದ ಹೋರಾಟ ನೋಡಿದ ಅವರಿಗೆ ನಮ್ಮ ಶಕ್ತಿ ಏನೆಂಬುದು ಗೊತ್ತಿದೆ. ನಮ್ಮ ತಂಟೆಗೆ ಒಂದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಅರಿವು ಅವರಿಗಿದೆ. ಜು.25ರಂದು ರೈತರ ಪರವಾಗಿ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಒಂದು ವೇಳೆ ಈ ಸರ್ಕಾರ ನಮ್ಮ ವಿರುದ್ಧವೇನಾದರೂ ನಿರ್ಧಾರ ಮಾಡಿದರೆ, ನಮ್ಮ ಚಳವಳಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ನಂಜಪ್ಪ ಎಚ್ಚರಿಕೆ ನೀಡಿದರು. ಭೂಮಿ ಕೊಡಲು ಎಷ್ಟು ಜನ ಸಿದ್ಧರಿದ್ದಾರೆ ಎಂಬ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ನಮ್ಮ ಪರವಾಗಿ ನಿರ್ಧಾರ ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರವಾಗುತ್ತದೆ ಎಂದು ರೈತ ಮಹಿಳೆ ಮುನಿವೆಂಕಟಮ್ಮ ಎಚ್ಚರಿಸಿದರು.