ಆಸ್ತಿ ತೆರಿಗೆಯಲ್ಲಿ ಧರ್ಮಸ್ಥಳ ಗ್ರಾಪಂ ದಾಖಲೆ : ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮಾಹಿತಿ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಧರ್ಮಸ್ಥಳ ಗ್ರಾಪಂ ತೆರಿಗೆ ಸಂಗ್ರಹದಲ್ಲಿ ದ.ಕ ಜಿಲ್ಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಒಟ್ಟು 1.55 ಕೋಟಿ ರೂ. ತೆರಿಗೆಯಲ್ಲಿ 1.06 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಹೇಳಿದರು.

ಗ್ರಾಮದಲ್ಲಿ 9818 ಜನಸಂಖ್ಯೆ ಹೊಂದಿದ್ದು, 2858 ಕುಟುಂಬಗಳಿವೆ. 2518 ವಾಸ್ತವ್ಯ ಮನೆಗಳಿದ್ದು, 484 ವಾಣಿಜ್ಯ ಕಟ್ಟಡಗಳಿವೆ. ಗ್ರಾಪಂ ನಿರ್ಮಲ ಗ್ರಾಮ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಸ್ವಚ್ಛತಾ ಹೀ ಸೇವಾ, ಡಾಕ್ಟರ್ ಶಿವರಾಮ ಕಾರಂತ ಪ್ರಶಸ್ತಿ ಪಡೆದಿದೆ ಎಂದು ಧರ್ಮಸ್ಥಳ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಧರ್ಮಸ್ಥಳ ಗ್ರಾಪಂ ಅತೀ ಹೆಚ್ಚು ಪ್ರವಾಸಿಗರನ್ನು ಸಂದರ್ಶಿಸುವ ಕ್ಷೇತ್ರವಾಗಿದ್ದು, ಅಭಿವೃದ್ಧಿ ದೃಷ್ಟಿಯಲ್ಲೂ ಬಹಳಷ್ಟು ಮುಂದಿದೆ. 8 ವಾರ್ಡ್‌ಗಳನ್ನು ಹೊಂದಿದ್ದು, 7,083 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. 1150 ಎಕರೆ ಕೃಷಿ ಭೂಮಿ ಹೊಂದಿದ್ದು, ಮಂಡಲ ಪಂಚಾಯಿತಿನಿಂದ ಆರಂಭಿಸಿ ಗ್ರಾಮದ ಅಭಿವೃದ್ಧಿ ಜನಗಳಿಗೆ ಮುಟ್ಟುವ ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಪಾರದರ್ಶಕ, ಪರಿಣಾಮಕಾರಿಯಾಗಿ ಮಾಡಿದ್ದೇವೆ. ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ಕೈಗೊಂಡಿದ್ದೇವೆ. ಏಕಬಳಕೆ ಪ್ಲಾಸ್ಟಿಕ್ ನಿಷೇಧ ಗ್ರಾಪಂ ಮಾಡುವ ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, 2023 ಅಕ್ಟೋಬರ್ 2ರಂದು ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಏಕಬಳಕೆ ಮುಕ್ತ ಗ್ರಾಮ ಘೋಷಣೆ ಮೂಲಕ ನಿರಂತರ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಗ್ರಾಪಂ ಅಧ್ಯಕ್ಷೆ ವಿಮಲಾ, ಪಿಡಿಒ ದಿನೇಶ್ ಎಂ., ಲೆಕ್ಕ ಸಹಾಯಕಿ ಪ್ರಮೀಳಾ, ಸದಸ್ಯೆ ಸುನೀತಾ, ವಸಂತ, ಹರ್ಷಿತ್ ಜೈನ್, ಹರೀಶ್, ಮುರಳೀದಾಸ್, ಸಿಬ್ಬಂದಿ ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ 1.18 ಕೋಟಿ ರೂ. ಬಂದಿದೆ. ಪಂಚಾಯಿತಿ ನಿಧಿಯಡಿ 4.77 ಕೋಟಿ ರೂ. ಕಾಮಗಾರಿ ನಡೆಸಲಾಗಿದೆ. 273 ಮಂದಿ ಒಟ್ಟು ಅರ್ಹ ನಿವೇಶನ ರಹಿತರಿದ್ದಾರೆ. ರಸ್ತೆ ಕಾಂಕ್ರೀಟ್, ತಡೆಗೋಡೆ, ಕಟ್ಟಡ ನಿರ್ಮಾಣ, ನೀರು ನಿರ್ವಹಣೆ, ಮೋರಿ ರಚನೆ ಸಹಿತ 6.75 ಕೋಟಿ ರೂ. ವ್ಯಯಿಸಲಾಗಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ನಿಧಿಯಡಿಯಲ್ಲಿ ಅಶೋಕನಗರ ಹಾಗೂ ಮುಳಿಕ್ಕಾರಿಗೆ 2.91 ಕೋ.ರೂ.ಮೀಸಲಿಡಲಾಗಿದೆ. ಶ್ರೀನಿವಾಸ್ ರಾವ್, ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net