ನನ್ನ ಪುತ್ರಿಗೆ ನ್ಯಾಯ ಕೊಡಿಸಿ - ಅತ್ಯಾಚಾರ ಸಂತ್ರಸ್ತೆಯ ತಾಯಿ ಆಗ್ರಹ

Published on

ಪುತ್ತೂರು: ಬಪ್ಪಳಿಗೆ ನಿವಾಸಿಯೋರ್ವ ನನ್ನ ಪುತ್ರಿಗೆ ವಂಚಿಸಿರುವ ಬಗ್ಗೆ ದೂರು ನೀಡುತ್ತಿದ್ದಂತೆ ಮನೆಯಿಂದ ಯುವಕನನ್ನು ಪೊಲೀಸರು ಕರೆದುಕೊಂಡು ಬಂದಿದ್ದು, ಹುಡುಗನಿಗೆ ೨೧ ವರ್ಷ ತುಂಬುತ್ತಿದ್ದಂತೆ ನೋಂದಣಿ ವಿವಾಹ ಮಾಡಿಕೊಳ್ಳುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಡುವುದಾಗಿ ಹುಡುಗನ ತಂದೆ ಠಾಣೆಯಲ್ಲಿ ಹೇಳಿದ್ದರು. ಈ ಸಂದರ್ಭ ಪುತ್ತೂರು ಶಾಸಕರು ಪ್ರಕರಣ ದಾಖಲಿಸಬೇಡಿ, ಕಾನೂನುಬದ್ಧವಾಗಿ ವಿವಾಹ ಮಾಡುತ್ತಾರೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮೊದಲಿಗೆ ಪ್ರಕರಣ ದಾಖಲಿಸಿಲ್ಲ ಎಂದು ಸಂತ್ರಸ್ತ ಯುವತಿ ತಾಯಿ ನಮಿತಾ ಹೇಳಿದ್ದಾರೆ.

ಯುವಕ ಹಾಗೂ ಪುತ್ರಿ ನಡುವೆ ಹೈಸ್ಕೂಲ್‌ನಿಂದ ಲವ್ ಇದ್ದು, ಪ್ರೆಗ್ನೆನ್ಸಿ ತಪಾಸಣೆ ಬಳಿಕ ಈ ವಿಚಾರವನ್ನು ಇಬ್ಬರೂ ಬಂದು ತಿಳಿಸಿದ್ದಾರೆ. ಹುಡುಗನ ತಂದೆ ನೇರವಾಗಿ ಮಾತನಾಡಿ, ಮಗುವನ್ನು ತೆಗೆಸಿ ಎಂದಿದ್ದಾರೆ. ಆದರೆ ವೈದ್ಯಕೀಯ ತಪಾಸಣೆ ಸಂದರ್ಭ ೭.೫ ತಿಂಗಳಾದ ಕಾರಣ ತೆಗೆಯುವುದಕ್ಕೆ ಆಗುವುದಿಲ್ಲ. ಯುವತಿ ವಯಸ್ಸು ಚಿಕ್ಕದಾದ ಕಾರಣ ಪ್ರಾಣಕ್ಕೂ ಆಪತ್ತು ತರುವ ಸಾಧ್ಯತೆಯಿದೆಯೆಂದು ಯುವಕ ಹಾಗೂ ಆತನ ತಂದೆ ತಾಯಿ ಮುಂಭಾಗವೇ ವೈದ್ಯರು ತಿಳಿಸಿದ್ದರು. ಬಂಟ್ವಾಳದ ವೈದ್ಯರು ಮಗುವನ್ನು ತುಂಡು ಮಾಡಿ ತೆಗೆಯುತ್ತಾರೆ, ಇದಕ್ಕೆ ೪.೫ ಲಕ್ಷ ರೂ. ಖರ್ಚಾಗುತ್ತದೆ ನಾವು ಭರಿಸುತ್ತೇವೆ ಎಂದಿದ್ದರು. ಇದಕ್ಕೆ ಒಪ್ಪದಿದ್ದಾಗ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು, ಇದರಿಂದ ಠಾಣೆಗೆ ದೂರು ನೀಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂನ್ ೨೨ರಂದು ಹುಡುಗನ ತಂದೆ, ದೊಡ್ಡಪ್ಪ, ದೊಡ್ಡಮ್ಮ ಹಾಗು ಲಕ್ಷ್ಮೀ ಬೆಟ್ಟದ ಇಬ್ಬರು ವ್ಯಕ್ತಿಗಳು ಬಂದು ಮನೆಯಲ್ಲಿ ಮಾತುಕತೆ ಸಂದರ್ಭ ಹುಡುಗ ವಿವಾಹವಾಗುವುದಿಲ್ಲ, ಮಗು ನನ್ನದಲ್ಲ ಎಂದಿದ್ದಲ್ಲದೆ, ಏನು ಬೇಕಾದರೂ ಮಾಡಿ, ಇನ್ನು ನಾಲ್ಕು ಹುಡುಗರಿದ್ದಾರೆಂದು ಹೇಳಿ ಹೋಗಿದ್ದಾನೆ. ಪುತ್ತೂರು ಮನೆಯನ್ನು ಬಿಟ್ಟು ಹೋಗಬೇಕು, ಇಲ್ಲದಿದ್ದರೆ ಜೀವಕ್ಕೆ ಅಪಾಯ ಎಂದು ಹುಡುಗನ ತಂದೆ ಬೆದರಿಕೆ ಹಾಕಿದ್ದಾರೆ. ಹಿಂದು ಮುಖಂಡರಾದ ಅರುಣ್ ಪುತ್ತಿಲ, ಶರಣ್ ಪಂಪ್‌ವೆಲ್, ಮುರಳಿಕೃಷ್ಣ ಅವರಲ್ಲಿ ಸಮಸ್ಯೆಯನ್ನು ಹೇಳಿದ್ದೇವೆ. ಮುರಳಿಕೃಷ್ಣ ೧೦ ಲಕ್ಷದ ಆಮಿಷವನ್ನು ಇಟ್ಟಿದ್ದಾರೆ ಎಂದು ತಿಳಿಸಿದರು.

ಯಾರೊಬ್ಬರೂ ಹುಡುಗಿಗೆ ನ್ಯಾಯ ಕೊಡುವ ಬಗ್ಗೆ ಭರವಸೆ ನೀಡುತ್ತಿಲ್ಲ. ಮಗುವಿನ ಮುಖದಲ್ಲಿ ಯುವಕನ ಹೋಲಿಕೆಯಿದ್ದು, ನಾವು ಡಿಎನ್‌ಎ ತಪಾಸಣೆಗೂ ಸಿದ್ಧರಿದ್ದೇವೆ. ಆದರೆ ಯುವಕನ ತಂದೆ ತಪಾಸಣೆ ಬೇಡ ಎಂದಿದ್ದಾರೆ. ಹಿಂದು ಸಂಘಟನೆಗಳಿದ್ದು, ಈಗ ನನ್ನ ಪುತ್ರಿಗೆ ನ್ಯಾಯ ನೀಡುವವರು ಯಾರು? ಮುಂದಿನ ದಿನದಲ್ಲಿ ಮಹಿಳಾ ಆಯೋಗ, ಮಾನವಹಕ್ಕುಗಳ ಆಯೋಗ ಸೇರಿ ಎಲ್ಲ ಕಡೆಗೆ ದೂರು ನೀಡುತ್ತೇವೆ. ಇಲ್ಲಿಯೂ ನ್ಯಾಯ ಸಿಗದೇ ಹೋದರೆ, ಪ್ರತಿಭಟನೆ ನಡೆಸುವುದಕ್ಕೂ ಸಿದ್ಧಎಂದು ಎಚ್ಚರಿಸಿದ್ದಾರೆ.

ಸಂತ್ರಸ್ತೆಯ ಚಿಕ್ಕಮ್ಮ ನಂದಿನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net