ಪುತ್ತೂರು: ಜಿಲ್ಲೆಯಲ್ಲಿ ದ್ವೇಷ ಭಾಷಣಗಳು ಕೊಲೆಗಳ ಸರಣಿಗೆ ಕಾರಣವಾಗುತ್ತದೆ. ಕೊಲೆಗೆ ಪ್ರೇರೇಪಿಸುವರು ಬಹಳಷ್ಟು ಅಪಾಯಕಾರಿಯಾಗಿದ್ದಾರೆ. ಕೋಮುಗಲಭೆಗಳಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಕೋಮುಗಲಭೆಗಳನ್ನು ಪ್ರಚೋದಿಸಿ ಅಮಾಯಕರ ಸಾವಿಗೆ ಕಾರಣರಾಗುತ್ತಿದ್ದಾರೆ. ದ್ವೇಷ ಭಾಷಣ ಅಪರಾಧಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಅಪರಾಧಿಯ ಧರ್ಮವನ್ನು ಲೆಕ್ಕಿಸದೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿದೆ. ಕಾಂಗ್ರೆಸ್ ಸರ್ಕಾರ ಆಂಟಿ ಕಮ್ಯುನಲ್ ಪೋರ್ಸನ್ನು ಅಸ್ತಿತ್ವಕ್ಕೆ ತಂದು ಜಿಲ್ಲೆಯಲ್ಲಿ ಮತೀಯವಾದಿಗಳ ಬೆನ್ನು ಮೂಳೆ ಮುರಿಯುವ ಕಾರ್ಯಕ್ಕೆ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ದ್ವೇಷ ಹರಡಿ ಜನರ ನೆಮ್ಮದಿ ಕೆಡಿಸುವ ಸಮಾಜದ್ರೋಹಿ ಶಕ್ತಿಗಳನ್ನು ಧರ್ಮ ಭೇದ ನೋಡದೆ ಹತ್ತಿಕ್ಕಲು ಮುಂದಾಗಿ, ಅವರ ಗಡೀಪಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ರವೀಂದ್ರ ರೆ ನೆಕ್ಕಿಲು, ಚಂದ್ರಪ್ರಭಾ ಗೌಡ, ರಾಮ ಮೇನಾಲ, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.