6ರಂದು ಕರ್ನೋಡಿ ಶಾಲೆ ಹಸ್ತಾಂತರ : ವಕೀಲ ಬಿ.ಕೆ.ಧನಂಜಯ ರಾವ್ ಮಾಹಿತಿ

Published on

ಬೆಳ್ತಂಗಡಿ: ಕರ್ನೋಡಿ ಲಾಯಿಲ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ಕಾನ್‌ಫಿನ್ ಹೋಮ್ಸ್ ಸಂಸ್ಥೆ ಬೆಂಗಳೂರು, ರೋಟರಿ ಇಂದಿರಾನಗರ ಬೆಂಗಳೂರು, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ಸಹಕಾರದೊಂದಿಗೆ ನವೀಕರಣಗೊಂಡಿದ್ದು, ಹಸ್ತಾಂತರ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಏ.6ರಂದು ನಡೆಯಲಿದೆ ಎಂದು ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ, ವಕೀಲ ಬಿ.ಕೆ.ಧನಂಜಯ ರಾವ್ ಹೇಳಿದರು.

ಮಂಗಳವಾರ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 60 ವರ್ಷ ಇತಿಹಾಸ ಹೊಂದಿರುವ ಶಾಲೆ 50 ಲಕ್ಷ ರೂ. ವೆಚ್ಚದಲ್ಲಿ ಸಕಲ ಮೂಲಸೌಲಭ್ಯಗಳೊಂದಿಗೆ ಸಂಪೂರ್ಣ ನವೀಕರಣಗೊಂಡಿದೆ. ಖಾಸಗಿ ಶಾಲೆಗೆ ಪೈಪೋಟಿ ನೀಡುವ ರೀತಿಯಲ್ಲಿ ಸಕಲ ಮೂಲಸೌಲಭ್ಯ ಕಲ್ಪಿಸಲಾಗಿದೆ. ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ 15 ಲಕ್ಷ ರೂ, ಹಳೇ ವಿದ್ಯಾರ್ಥಿ ಸಂಘದಿಂದ ಸುಮಾರು 15 ಲಕ್ಷ ರೂ, ಕ್ಯಾನ್‌ಫಿನ್ ಹೋಮ್ಸ್ ಸಂಸ್ಥೆ ಬೆಂಗಳೂರು, ರೋಟರಿ ಇಂದಿರಾ ನಗರ ಬೆಂಗಳೂರು, ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ 12 ಲಕ್ಷ ರೂ. ಬಳಕೆಯಾಗಿದೆ. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅನುದಾನದಲ್ಲಿ ಶಾಲೆಯ ಸಭಾಭವನ ನಿರ್ಮಾಣ, ಪಂಚಾಯಿತಿ ವತಿಯಿಂದ ಇಂಗುಗುಂಡಿ ಹಾಗೂ ತಡೆಗೋಡೆ ನಿರ್ಮಾಣವಾಗಿದೆ ಎಂದರು.

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ, ಶ್ರಮದಾನದ ಮೂಲಕ ಹೆಚ್ಚಿನ ಕೆಲಸ ಮಾಡಲಾಗಿದೆ. ಶಾಲಾಭಿವೃದ್ಧಿಯಲ್ಲಿ ಊರವರ ಸಹಕಾರವಿದ್ದಾಗ ಕೆಲಸಗಳಿಗೆ ವೇಗ ಬರಲು ಸಾಧ್ಯವಾಗುವುದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಊರವರು, ವಿದ್ಯಾರ್ಥಿಗಳ ಪಾಲಕರ ಸಹಕಾರದ ಅಗತ್ಯವಿದೆ ಎಂದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಮಾಹಿತಿ ನೀಡಿದರು. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಣೇಶ್ ಆರ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸೌಮ್ಯಾ, ಮುಖ್ಯಶಿಕ್ಷಕ ಜಗನ್ನಾಥ ಎಂ, ಸಹಶಿಕ್ಷಕ ಕೃಷ್ಣ ಕುಮಾರ್ ಉಪಸ್ಥಿತರಿದ್ದರು.

ಸಭಾಭವನ ಲೋಕಾರ್ಪಣೆ

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಮಾತನಾಡಿ, ಸ್ನೇಹ ಸಮ್ಮಿಲನ ಹಾಗೂ ಶಾಲೆಯ ಹಸ್ತಾಂತರ ಕಾರ್ಯಕ್ರಮವನ್ನು ಬೆಳಗ್ಗೆ 10ಕ್ಕೆ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ತುಳುಕೂಟ ಬರೋಡದ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಹಳೇ ವಿದ್ಯಾರ್ಥಿ ಸಂಘದ ಕಚೇರಿ ಉದ್ಘಾಟಿಸಲಿದ್ದಾರೆ. ಸುರೇಶ್ ಶೆಟ್ಟಿ ಲಾಯಿಲ ಅಧ್ಯಕ್ಷತೆ ವಹಿಸಲಿದ್ದು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್, ಗ್ರಾಪಂ ಅಧ್ಯಕ್ಷೆ ಜಯಂತಿ ಎಂ.ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮುಂತಾದವರು ಭಾಗವಹಿಸಲಿದ್ದಾರೆ. ಸಂಜೆ 7ಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಸಭಾಭವನ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನಿಸಾ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಮೋಹನ್ ಕುಮಾರ್, ಬಿ.ಕೆ.ಧನಂಜಯ ರಾವ್, ಸಂತೋಷ್ ಕುಮಾರ್, ಕಿರಣ್ ಚಂದ್ರ ಡಿ.ಪುಷ್ಪಗಿರಿ, ಪೂರಣ್ ವರ್ಮ, ದೇವದಾಸ್ ಶೆಟ್ಟಿ ಹಿಬರೋಡಿ, ಸುನೀಲ್ ಶೆಣೈ, ಪ್ರಸಾದ್ ಶೆಟ್ಟಿ ಏಣಿಂಜೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮಕ್ಕಳಿಂದ ಸಾಂಸ್ಕೃತಿಕ ಕಲರವ

ಬೆಳಗ್ಗೆ 11.30ರಿಂದ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಲರವ, ಮಧ್ಯಾಹ್ನ 3ರಿಂದ ಹಳೇ ವಿದ್ಯಾರ್ಥಿ ಸಂಘದಿಂದ ವೈವಿಧ್ಯಮಯ ಕಾರ್ಯಕ್ರಮ, ಸಂಜೆ 4.30ರಿಂದ ಕಾರ್ಕಳ ತೆಲಿಕೆದ ತೆನಾಲಿ ತಂಡದವರಿಂದ ತೆಲಿಕೆದ ಬರ್ಸ ಹಾಗೂ ರಾತ್ರಿ 8ರಿಂದ ಅಮ್ಮ ಕಲಾವಿದರ್ ಕುಡ್ಲದವರಿಂದ ಅಮ್ಮೆರ್ ತುಳು ಹಾಸ್ಯಮಯ ನಾಟಕ ಕಾರ್ಯಕ್ರಮ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net