ಕುಂಬಳೆ: ಮಂಜೇಶ್ವರ ತಾಲೂಕು ಚಾಲ್ತಿಗೆ ಬಂದು ದಶಕವಾದರೂ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಮಂಜೂರುಗೊಳಿಸಲು ಸಾಧ್ಯವಾಗದಿರುವುದಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃ ಕಾರಣ ಎಂದು ಮಂಗಲ್ಪಾಡಿ ಜನಪರ ವೇದಿಕೆ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ತಾಲೂಕು ಕಚೇರಿ ಹಾಗೂ ಸಂಬಂಧಪಟ್ಟ ಕಚೇರಿಗಳನ್ನು ಮಂಜೂರುಗೊಳಿಸದೆ ಭಾಷಾ ಅಲ್ಪಸಂಖ್ಯಾತರಲ್ಲಿ ಸರ್ಕಾರ ತೀವ್ರ ಅವಗಣನೆ ತೋರುತ್ತಿದೆ. ಮಂಜೂರು ಮಾಡಿದ ಕಚೇರಿಗಳೆಲ್ಲ ಬಾಡಿಗೆ ಕಟ್ಟಡದಲ್ಲಿದ್ದು, ಇದರ ವಿರುದ್ಧ ಜನರನ್ನು ಸೇರಿಸಿ ತೀವ್ರ ಆಂದೋಲನ ನಡೆಸುವುದಾಗಿ ಜನಪರ ವೇದಿಕೆ ಎಚ್ಚರಿಸಿದೆ.
2014ರಲ್ಲಿ ತಾಲೂಕು ಮಂಜೂರುಗೊಂಡ ಅಂದಿನಿಂದ ಉಪ್ಪಳದ ಖಾಸಗಿ ಕಟ್ಟಡದ ಮೇಲಂತಸ್ತಿನಲ್ಲಿ ಪ್ರಧಾನ ಕಚೇರಿಗಳು ಕಾರ್ಯಾಚರಿಸುತ್ತಿವೆ. ಲಿಫ್ಟ್ ಸೌಕರ್ಯ ಕೂಡಾ ಇಲ್ಲದ ಇಲ್ಲಿ ಪ್ರಾಯವಾದವರು, ಮಹಿಳೆಯರು, ರೋಗಿಗಳ ಸಹಿತ ಜನರು ಕಚೇರಿಯ ಮೆಟ್ಟಿಲುಗಳನ್ನು ಹತ್ತಲು ಬಹಳಷ್ಟು ಸಂಕಷ್ಟಪಡುತ್ತಿದ್ದಾರೆ. ಮಂಜೇಶ್ವರ ತಾಲೂಕಿನ ಜತೆಯಲ್ಲೇ ಮಂಜೂರಾದ ವೆಳ್ಳರಿಕುಂಡು ತಾಲೂಕು ಎಲ್ಲ ರೀತಿಯಲ್ಲೂ ಸಜ್ಜುಗೊಂಡಿದೆ. ರಾಜ್ಯದಲ್ಲಿ ಹೊಸ ತಾಲೂಕುಗಳಿಗೆ ಬೇಕಾಗಿ ಸರ್ಕಾರ ತುರ್ತು ಚರ್ಚೆ, ತೀರ್ಮಾನಗಳನ್ನು ಕೈಗೊಳ್ಳುತ್ತಿರುವಾಗ ಮಂಜೇಶ್ವರ ತಾಲೂಕನ್ನು ಮಾತ್ರ ಅವಗಣಿಸುತ್ತಿರುವುದು ವಂಚನೆಯಾಗಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಬು ತಮಾಮ್, ಸಿದ್ದಿಕ್ ಕೈಕಂಬ, ಅಶಾಫ್ ಮೂಸ, ಶಾಜಹಾನ್, ಶಂಸು ಕುಬಣೂರು, ಸಾಜನ್ ಕುಕ್ಕಾರ್ ಉಪಸ್ಥಿತರಿದ್ದರು.
ಕಟ್ಟಡ ಮಾಲೀಕನ ಅಸ್ಥೆಯಂತೆ ವ್ಯವಸ್ಥೆ
ತಾಲೂಕು ಕಚೇರಿ ಕಾರ್ಯಾಚರಿಸಲು ಇರಬೇಕಾದ ಯಾವುದೇ ಸೌಕರ್ಯವಿಲ್ಲದ ಕಟ್ಟಡದಲ್ಲಿ ಕಟ್ಟಡ ಮಾಲೀಕನ ಆಸಕ್ತಿಗೆ ಅನುಸಾರವಾಗಿ ಕಚೇರಿ ಸೌಕರ್ಯ ಸಿದ್ಧಪಡಿಸಲಾಗಿದೆ. ಇದರಿಂದ ಜನಸಾಮಾನ್ಯರು ಕಚೇರಿಗೆ ತಲುಪಿದರೆ ಸಮಸ್ಯೆಗೆ ತುತ್ತಾಗುತ್ತಾರೆ. ಈ ಬಾರಿಯ ಮುಂಗಡಪತ್ರದಲ್ಲೂ ಮಂಜೇಶ್ವರ ತಾಲೂಕಿನ ಬಗ್ಗೆ ಪರಾಮರ್ಶೆ ನಡೆಸಿಲ್ಲ. ತಾಲೂಕು ಆಧಾರದಲ್ಲಿ ಜಾರಿಗೆ ಬಂದ ಸಾರ್ವಜನಿಕ ವಿತರಣಾ ಕಚೇರಿ, ತಾಲೂಕು ಆಸ್ಪತ್ರೆಗಳ ಸ್ಥಿತಿಯೂ ಇದೇ ಆಗಿದೆ. ನ್ಯಾಯಾಲಯದ ಸಮುಚ್ಚಯ, ಸಬ್‌ಜೈಲ್, ಡಿವೈಎಸ್‌ಪಿ ಕಚೇರಿ, ಆರ್‌ಟಿಒ ಕಚೇರಿ ಎಂದು ಜಾರಿಯಾಗಲಿದೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ. ಇನ್ನು ಈ ನಿರ್ಲಕ್ಷೃ ಮುಂದುವರಿಸಿದರೆ ಆಂದೋಲನದೊಂದಿಗೆ ಮುಂದುವರಿಯುವುದಾಗಿ ಜನಪರ ವೇದಿಕೆ ಎಚ್ಚರಿಸಿದೆ.