ಸುಳ್ಯ: ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಬದ್ಧನಾಗಿದ್ದೇನೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ಕೆಪಿಸಿಸಿ ಅಧ್ಯಕ್ಷರು ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಬ್ಲಾಕ್ ಕಾಂಗ್ರೆಸ್ಸಿಗೆ ಯಾರನ್ನು ಅಧ್ಯಕ್ಷ ಮಾಡಬೇಕು ಎಂಬುದು ಕೆಪಿಸಿಸಿಗೆ ಬಿಟ್ಟ ವಿಚಾರ. ಕೆಪಿಸಿಸಿ ಯಾವ ನಿರ್ಧಾರ ತಗೊಂಡರೂ ಅದನ್ನು ಸ್ವಾಗತಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಿದ ಹಿನ್ನೆಲೆಯಲ್ಲಿ ಫೆ.24ರಂದು ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸದ್ಯ ಆದೇಶಕ್ಕೆ ತಾತ್ಕಾಲಿಕ ತಡೆ ಮಾಡಿರುವುದರಿಂದ ಸಮಾರಂಭವನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಕೆ.ಗೋಕುಲ್‌ದಾಸ್, ಚೇತನ್ ಕಜೆಗದ್ದೆ, ಶಶಿಧರ ಎಂ.ಜೆ, ಧೀರಾ ಕ್ರಾಸ್ತಾ, ರಾಜು ಪಂಡಿತ್, ನಂದರಾಜ ಸಂಕೇಶ, ಜಯಪ್ರಕಾಶ್ ನೆಕ್ರಪ್ಪಾಡಿ ಉಪಸ್ಥಿತರಿದ್ದರು.