ಅರ್ಚಕರಿಂದ ಭಕ್ತರ ಭಾವನೆಗೆ ಧಕ್ಕೆ : ಪ್ರಭಾಕರ ಶೆಟ್ಟಿ ಉಪ್ಪಡ್ಕ ಆರೋಪ : ಓಡೀಲು ದೇವಳ ವ್ಯವಸ್ಥಾಪನಾ ಸಮಿತಿ ಸಭೆಗೆ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಎಂಟು ನೂರು ವರ್ಷ ಇತಿಹಾಸವಿರುವ ತಾಲೂಕಿನ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರ ಭಾವನೆಗಳಿಗೆ ಬೆಲೆ ಕೊಡದ ರಾಘವೇಂದ್ರ ಭಟ್ ಅವರನ್ನು ಯಾವುದೇ ಕಾರಣಕ್ಕೂ ಅರ್ಚಕ ಸ್ಥಾನಕ್ಕೆ ನೇಮಕ ಮಾಡಕೂಡದು. ಕ್ಷೇತ್ರದ ಭಕ್ತರ ಭಾವನೆಗಳಿಗೆ ಪೂರಕವಾಗಿ ನೂತನ ವ್ಯವಸ್ಥಾಪನ ಸಮಿತಿ ಮತ್ತು ಭಕ್ತರ ಸಭೆಯನ್ನು ಕೂಡಲೇ ಕರೆಯಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮಕಲಶೋತ್ಸವದ ನಂತರ ತಂತ್ರಿಗಳ ಮುಂದಾಳತ್ವದಲ್ಲಿ ದಿಟ್ಟಂ ಮೂಲಕ ರಾಘವೇಂದ್ರ ಭಟ್ಟರು ಮುಂದಿನ ಬ್ರಹ್ಮಕಲಶದ ತನಕ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಕೂಡದು ಎಂದು ನಿರ್ಧಾರವಾಗಿದೆ. ಅರ್ಚಕರಾಗಿ ರಾಘವೇಂದ್ರ ಭಟ್ ಬರಕೂಡದು ಎಂಬುದು ದೇವಸ್ಥಾನದ ಭಕ್ತರ ಅಭಿಪ್ರಾಯವೂ ಆಗಿದೆ. ಆದರೆ ನೂತನ ವ್ಯವಸ್ಥಾಪನಾ ಸಮಿತಿಯವರು ದಿಟ್ಟಂಗೆ ವಿರುದ್ಧವಾಗಿ ರಾಘವೇಂದ್ರ ಭಟ್ ಅವರನ್ನು ಮತ್ತೆ ಅರ್ಚಕರಾಗಿ ನೇಮಕ ಮಾಡುತ್ತಾರೆ ಎಂದು ಮಾಧ್ಯಮದ ಮೂಲಕ ತಿಳಿದುಬಂದಿದ್ದು ಈ ಬಗ್ಗೆ ಭಕ್ತರಲ್ಲಿ ಗೊಂದಲ ಮೂಡಿದೆ ಎಂದರು.

ದೇವಸ್ಥಾನದಲ್ಲಿ ಪ್ರತಿ ಸೋಮವಾರ ರಂಗಪೂಜೆ ನಡೆದು ಅನ್ನಸಂತರ್ಪಣೆ ನಡೆಯುತಿತ್ತು. ಆದರೆ ನೂತನ ವ್ಯವಸ್ಥಾಪನಾ ಸಮಿತಿ ಬಂದ ಬಳಿಕ ಈ ಬಗೆಗೂ ಗೊಂದಲ ಮೂಡಿದ್ದು, ರಂಗಪೂಜೆಗೆ ಮಾಡಿಸಿದ ರಶೀದಿಯಲ್ಲಿಯೇ ಅನ್ನ ಸಂತರ್ಪಣೆ ಬಾಬ್ತು ಎಂದು ಬರೆದು ಪ್ರತ್ಯೇಕ ಕೆಲವರಿಂದ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನಾಲ್ಕು ಗ್ರಾಮಗಳ ಭಕ್ತರ ಸಭೆ ಕರೆದು ಅರ್ಚಕರು ಹಾಗೂ ಕ್ಷೇತ್ರದಲ್ಲಿ ನಡೆಯುವ ಸೇವೆಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನೂತನ ವ್ಯವಸ್ಥಾಪನ ಸಮಿತಿ ನೀಡಬೇಕು. ಆ ಸಭೆಗೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಮತ್ತು ತಂತ್ರಿಗಳನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಕೋಶಾಧಿಕಾರಿ ವಸಂತ ಗೌಡ, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯಾ, ಯುವ ಸಮಿತಿಯ ಅಶ್ವಥ್ ಕುಮಾರ್, ಪದ್ಮನಾಭ ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net