

ಅರಸೀಕೆರೆ: ಸಾಣೇಹಳ್ಳಿ ಶ್ರೀ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕುರಿತು ಲಘುವಾಗಿ ಮಾತನಾಡಿರುವ ನಾಟಕ ಅಕಾಡೆಮಿ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೂಡಲೇ ಶ್ರೀಗಳ ಕ್ಷಮೆ ಕೋರಬೇಕು ಎಂದು ಸಾಧು ಲಿಂಗಾಯತ ಸಮಾಜದ ತಾಲೂಕು ಕಾರ್ಯದರ್ಶಿ ನಾಗಸಮುದ್ರ ಸ್ವಾಮಿ ಒತ್ತಾಯಿಸಿದರು.
ತುಲಾಭಾರ ನಾಟಕ ರಚನೆಯ ಉದ್ದೇಶ, ಲೇಖಕ, ಔಚಿತ್ಯ ಏನೆಂಬುದನ್ನು ತಿಳಿಯದೆ ಕಾರ್ಯಪ್ಪ ಮನಬಂದಂತೆ ಮಾತನಾಡಿರುವುದು ಅವರ ಕೊಳಕು ಮನಸ್ಥಿತಿಗೆ ಸಾಕ್ಷಿಯಾಗಿದೆ. ನಾಟಕವನ್ನು ಅದರದ್ದೇ ಆದ ದೃಷ್ಟಿಕೋನದಲ್ಲಿ ನೋಡಬೇಕು. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಪೂರ್ವಾಗ್ರಹ ಪೀಡಿತ ಹೇಳಿಕೆ ನೀಡಿದ್ದಾರೆ. ನಾಟಕ ಸೇವೆ ಎಲ್ಲ ಬಗೆಯ ಕ್ಷೇತ್ರದಲ್ಲಿ ಸಾಣೇಹಳ್ಳಿ ಶ್ರೀಗಳ ಕೊಡುಗೆ ಎಂದಿಗೂ ಮರೆಯಬಾರದು. ವಾಸ್ತವ ಮನಗಂಡು ತಕ್ಷಣವೇ ಶ್ರೀಗಳ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜ.11ರಂದು ಕಲಾಭವನದಲ್ಲಿ ಅಡ್ಡಂಡ ಕಾರ್ಯಪ್ಪ ನಿರ್ದೇಶನದ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ತರಳಬಾಳು ಯುವ ವೇದಿಕೆ ಅಧ್ಯಕ್ಷ ಮಧು, ಗೌರವಾಧ್ಯಕ್ಷ ಪ್ರವೀಣ್, ಶಿವಕುಮಾರ ಬಳಗದ ಉಮಾಪತಿ ಇದ್ದರು.