ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಸಹಿ, ಆದೇಶ ಅಥವಾ ಒತ್ತಡವಿಲ್ಲದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ, ಮೈಸೂರಿನ ಮುಡಾದಲ್ಲಿ ಬಿಜೆಪಿಯದ್ದೇ ಆಡಳಿತವಿದ್ದಾಗ, ಬಿಜೆಪಿಯವರೇ ರೂಪಿಸಿದ ೫೦-೫೦ ಅನುಪಾತದ ಪರಿಹಾರವನ್ನು ಅರ್ಹವಾಗಿಯೇ ಪಡೆದುಕೊಂಡ ಪ್ರಕರಣವನ್ನು ಭ್ರಷ್ಟಾಚಾರವೆಂದು ಬಿಂಬಿಸಿ, ಬೀದಿಯಲ್ಲಿ ರಂಪ ಮಾಡಿರುವ ಷಡ್ಯಂತ್ರಗಳನ್ನು ನಾವು ಬಯಲುಗೊಳಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷವನ್ನು ಹೇಗಾದರೂ ಮಾಡಿ ಹಣಿಯಬೇಕೆಂಬ ಉದ್ದೇಶದಿಂದ ರೂಪಿಸಲಾದ ರಾಜಕೀಯ ಪ್ರೇರಿತ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿ ಇದೀಗ ಹತಾಶಗೊಂಡಿದೆ. ಆಪರೇಷನ್ ಕಮಲಕ್ಕೂ ವಿಫಲ ಪ್ರಯತ್ನ ನಡೆಸಲಾಯಿತು. ರಾಜ್ಯಪಾಲರ ಅಽಕಾರವನ್ನು ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನು ಅಽಕಾರದಿಂದ ಕೆಳಗಿಳಿಸುವುದೇ ಈ ಷಡ್ಯಂತ್ರದ ಉದ್ದೇಶ. ಪ್ರಕರಣಕ್ಕೆ ಸಂಬಂಽಸಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಬ್ಲಾಕ್ ಉಪಾಧ್ಯಕ್ಷ ಮೌನೀಸ್ ಮಸ್ಕರೇನಿಯಸ್, ಹಿಂದುಳಿದ ಘಟಕ ಅಧ್ಯಕ್ಷ ಹರೀಶ್ ಕೊಟ್ಯಾನ್, ಎಸ್.ಟಿ. ಘಟಕ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.