ಕಾಮಗಾರಿ ಸ್ಥಗಿತಗೊಳಿಸಲು ಗುತ್ತಿಗೆದಾರರ ನಿರ್ಧಾರ : ಬ್ರೇಕ್‌ಡೌನ್ ಕೆಲಸದ ದರ ಭಾರಿ ಇಳಿಕೆಯಿಂದ ನಷ್ಟ ಹಿನ್ನೆಲೆ

Published on

ಸುಳ್ಯ: ವಿದ್ಯುತ್ ಲೈನ್‌ಗಳ ಕಾಮಗಾರಿ ದರದಲ್ಲಿ ತೀವ್ರ ಇಳಿಕೆ ಮಾಡಿರುವ ಕಾರಣ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಆದುದರಿಂದ ಮುಂದಿನ ಸೋಮವಾರದಿಂದ ಬ್ರೇಕ್‌ಡೌನ್ ಕಾಮಗಾರಿ ಸ್ಥಗಿತಗೊಳಿಸಲು ನಿರ್ಧಾರಿಸಲಾಗಿದೆ ಎಂದು ಕರ್ನಾಟಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೋಮಶೇಖರ ಪೈಕ, ಕಳೆದ ಹಲವಾರು ವರ್ಷಗಳಿಂದ ವಿದ್ಯುತ್ ಲೈನ್‌ಗಳ ಬ್ರೇಕ್‌ಡೌನ್ ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅತಿ ಶೀಘ್ರದಲ್ಲಿ ನಡೆಸಿಕೊಂಡು ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಸ್ಕಾಂ ನೀಡುತ್ತಿದ್ದ ಬ್ರೇಕ್‌ಡೌನ್ ಕಾಮಗಾರಿ ದರದಲ್ಲಿ ಭಾರಿ ಇಳಿಕೆಯಾಗಿದೆ. ಈ ಹಿಂದೆ ಇದ್ದ ಬ್ರೇಕ್‌ಡೌನ್ ಕಾಮಗಾರಿಗಳ ಪ್ರಾದೇಶಿಕ ಭತ್ಯೆ, ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್‌ಡೌನ್ ಭತ್ಯೆಗಳನ್ನು ರದ್ದುಗೊಳಿಸಿ, ಕೇವಲ ಶೇ.12 ಭತ್ಯೆ ನೀಡುತ್ತಿದ್ದು, ಇದರಿಂದ ವಿದ್ಯುತ್ ಗುತ್ತಿಗೆದಾರರು ಭಾರಿ ನಷ್ಟ ಅನುಭವಿಸುವಂತಾಗಿದೆ. ಈ ಹಿಂದೆಯೂ ಇದರ ಬಗ್ಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ವಿದ್ಯುತ್ ಗುತ್ತಿಗೆದಾರರು ಬ್ರೇಕ್‌ಡೌನ್ ಕೆಲಸಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಿರುತ್ತೇವೆ. ಇದರಿಂದಾಗುವ ಸಾರ್ವಜನಿಕ ತೊಂದರೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ಹೇಳಿದರು.

ಬ್ರೇಕ್‌ಡೌನ್ ಕಾಮಗಾರಿಗಳಲ್ಲಿ ಈ ಹಿಂದಿನಂತೆಯೇ ಪ್ರಾದೇಶಿಕ, ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್‌ಡೌನ್ ಭತ್ಯೆಗಳನ್ನು ನೀಡಿದರೆ ಮಾತ್ರ ಕೆಲಸಗಳನ್ನು ಮುಂದುವರಿಸಲು ಸಾಧ್ಯ. ತುರ್ತು ಸಂದರ್ಭದಲ್ಲಿ ಮುರಿದ ಕಂಬಗಳ ಬದಲಾವಣೆ, ವಯರ್‌ಗಳ ಬದಲಾವಣೆ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿ ಮಾಡಲಾಗುತ್ತದೆ. ಆದರೆ ಈಗ ನೀಡುವ ದರದಲ್ಲಿ ಕೆಲಸಗಾರರ ಸಂಬಳ, ವಾಹನ ಮತ್ತಿತರ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಆದುದರಿಂದ ಬ್ರೇಕ್‌ಡೌನ್ ಕೆಲಸಗಳನ್ನು ಸ್ಥಗಿತ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಾಯಿಲಪ್ಪ ಸಂಕೇಶ, ಕೆ.ಎಸ್.ಶ್ರೀಧರ, ಸುಳ್ಯ ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ ಕೋಶಾಧಿಕಾರಿ ಮಧುಕಿರಣ್ ಕೆ.ಎನ್, ಜತೆ ಕಾರ್ಯದರ್ಶಿ ಸತ್ಯನಾರಾಯಣ, ಚಿದಾನಂದ ಎಂ., ಧನಂಜಯ, ರಾಮ ಜೋಯಿಸ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net