

ಮಂಡ್ಯ: ಸದಾ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡೆ ಅವಶ್ಯಕವಾಗಿದೆ. ಇದರಿಂದಾಗಿ ಅವರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ನಗರದ ಒಳಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಕರ್ತರು ಮತ್ತವರ ಕುಟುಂಬದ ಸದಸ್ಯರಿಗೆ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಇರುತ್ತದೆ. ಯಾರೋ ಒಬ್ಬರು ಮಾತ್ರ ಗೆಲ್ಲುತ್ತಾರೆ. ಅದಕ್ಕೆ ಎಲ್ಲರೂ ಸೇರಿ ಆಟವಾಡುವುದರಿಂದ ಒಳ್ಳೆಯ ವಾತಾವರಣ ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕ್ರೀಡಾಕೂಟ ನಡೆಯುವಂತಾಗಲಿ, ಜಿಲ್ಲೆಯ ಎಲ್ಲ ಪತ್ರಕರ್ತರು ಮತ್ತು ಅವರ ಕುಟುಂಬದವರು ಕ್ರೀಡೆಯಲ್ಲಿ ಭಾಗವಹಿಸಲಿ ಎಂದು ಶುಭ ಕೋರಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ ಮಾತನಾಡಿ, ಕೋವಿಡ್ ಮಹಾಮಾರಿಯಿಂದಾಗಿ ಕಳೆದ ನಾಲ್ಕೈದು ವರ್ಷಗಳಿಂದ ವಾರ್ಷಿಕ ಕ್ರೀಡಾಕೂಟ ನಡೆದಿರಲಿಲ್ಲ. ಈ ವರ್ಷವಾದರೂ ಕ್ರೀಡಾಕೂಟ ನಡೆಯಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದೇವೆ. ಇದರಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಮಾತನಾಡಿದರು. ಪದಾಧಿಕಾರಿಗಳಾದ ಸೋಮಶೇಖರ್ ಕೆರಗೋಡು, ಕೆ.ಎನ್.ನವೀನ್‌ಕುಮಾರ್, ನಂಜುಂಡಸ್ವಾಮಿ ಇತರರಿದ್ದರು.