

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ಸುಸ್ಥಿರ ಪ್ರಗತಿ ಸಾಧಿಸಬೇಕಾದರೆ ಆರ್ಥಿಕ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಸಾರ್ವಕಾಲಿಕ ಮೌಲ್ಯಗಳೊಂದಿಗೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.
ಶುಕ್ರವಾರ ಉಜಿರೆಯಲ್ಲಿ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಸುದ್ದಿ ಸಮೂಹ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ ಪತ್ರಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳ ಸಾಮಾನ್ಯ ಓದುಗರು ಕೂಡ ಇಂದು ಗೊಂದಲದಲ್ಲಿದ್ದಾರೆ. ಪತ್ರಿಕೆಗಳು ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಪುತ್ತೂರು ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲ ರಾಕೇಶ್‌ಕುಮಾರ್ ಕಮ್ಮಾಜೆ ಮತ್ತು ಎಸ್.ಡಿ.ಎಂ.ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು.
ಪತ್ರಕರ್ತ ಡಾ.ಯು.ಪಿ.ಶಿವಾನಂದ, ಸಿ.ಇ.ಒ. ಸಿಂಚನಾ ಊರುಬೈಲು, ಪತ್ರಕರ್ತ ಮಂಜುನಾಥ ರೈ ಉಪಸ್ಥಿತರಿದ್ದರು.ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗ್ಡೆ ಸ್ವಾಗತಿಸಿದರು. ಸಂತೋಷ ಕುಮಾರ್ ಬೆಳ್ತಂಗಡಿ ವಂದಿಸಿದರು, ದಿವ್ಯಶ್ರೀ ಹೆಗ್ಡೆ ನಿರೂಪಿಸಿದರು.