ಪತ್ರಿಕಾ ವಿತರಕರ ಸಂಘಕ್ಕೆ 5 ಲಕ್ಷ ರೂ. ನೆರವು

IMG-20230905-WA0005
Published on

ವಿಜಯವಾಣಿ ಸುದ್ದಿಜಾಲ ಗದಗ

ಪತ್ರಿಕಾ ವಿತರಕರ ಸಂಘದ ಗದಗ ಜಿಲ್ಲಾ ಘಟಕಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ. ನೆರವು ನೀಡುವುದಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಘೋಷಿಸಿದರು.

ಸೋಮವಾರ ಇಲ್ಲಿನ ಹಳೆಸರಾಫ್ ಬಜಾರ್ ನಲ್ಲಿರುವ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಸಂಘದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆದರೆ ಶ್ರಮಜೀವಿಗಳಿಗೆ ಆದಾಯ ಕಡಿಮೆ. ಅಂಥವರಿಗಾಗಿ ಸರಕಾರ ಏನಾದರೂ ಸಹಾಯ ಮಾಡಿದರೆ ದೇಶವೇ ಹಾಳಾಯಿತು ಎಂದು ಟೀಕಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ಶೇ. 50ರಷ್ಟು ಜನ ಈಗಲೂ ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರನ್ನು ಮೇಲೆ ತರುವ ಪ್ರಯತ್ನ ಮಾಡಿದರೆ ದೇಶ ದಿವಾಳಿ ಮಾಡಿದರು ಎಂದು ಆರೋಪ ಮಾಡುತ್ತಾರೆ ಎಂದರು.

ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ. ಪತ್ರಿಕಾ ವಿತರಕರ ಹಲವಾರು ಬೇಡಿಕೆಗಳು ನ್ಯಾಯಯುತವಾಗಿವೆ. ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ಪತ್ರಿಕಾ ವಿತರಕರಿಗೂ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಅಗತ್ಯವೆನಿಸಿದರೆ ಪತ್ರಿಕಾ ವಿತರಕರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಎಲ್ಲ ಬೇಡಿಕೆ ಈಡೇರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೊಸಳ್ಳಿ ಜ. ಅಭಿನವ ಬೂದೀಶ್ವರ ಸ್ವಾಮೀಜಿ ಮಾತನಾಡಿ, ಪತ್ರಿಕಾ ವಿತರಕರು ನಿಜವಾದ ಶ್ರಮಜೀವಿಗಳು.‌ ಬದುಕಿನ ಸುಖ ದುಃಖ ಬದಿಗೊತ್ತಿ ನಿತ್ಯ ನಿರಂತರವಾಗಿ ಕಾಯಕದಲ್ಲಿ ನಿರತರಾದವರು. ಕಾಯಕ ಮತ್ತು ದಾಸೋಹ ಎನ್ನುವ ಶರಣರ ಪರಂಪರೆಯಲ್ಲಿ ಸಾಗುತ್ತಿದ್ದಾರೆ. ಪತ್ರಿಕಾ ವಿತರಕರ ವೃತ್ತಿ ಬದುಕು ಮತ್ತಷ್ಟು ಹಸನಾಗಲಿ. ಶ್ರಮಜೀವಿಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ ಎಂದು ಹಾರೈಸಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ ಮಾತನಾಡಿ, ಮಳೆ- ಬಿಸಿಲು ಎನ್ನದೆ ಪತ್ರಿಕಾ ವಿತರಕರು ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ. ಅಂಥ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಮಿಕ ಇಲಾಕೆ ಅಧಿಕಾರಿ ಭೀಮರಾವ್ ಜಾಧವ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಅಧ್ಯಕ್ಷ ಕಿಶನ್ ಮೇರವಾಡೆ, ಕಿತ್ತೂರು ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ, ಚತ್ರವರ್ತಿ ದಿನಪತ್ರಿಕೆ ಸಂಪಾದ ಎನ್.ಆರ್. ಭಾಂಡಗೆ, ಎಸ್.ಎನ್. ಬಳ್ಳಾರಿ ಇತರರು ವೇದಿಕೆಯಲ್ಲಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಬಸಯ್ಯ ವಿರಕ್ತಮಠ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಚಂದ್ರಯಾನ 3 ಯಶಸ್ಸಿಗೆ ಕಾರಣರಾದ ತಂಡದಲ್ಲಿದ್ದ ಗದಗ ನಗರದ ಸುಧೀಂದ್ರ ಬಿಂದಗಿ ಹಾಗೂ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಪವಿತ್ರ ಅಗಸಿಮುಂದಲ್, ಸೈಕ್ಲಿಂಗ್ ನಲ್ಲಿ ಸಾಧನೆ ಮಾಡಿದ ಪವಿತ್ರಾ ಕುರ್ತಕೋಟಿ, ಕುಸ್ತಿಪಟುಗಳಾಗ ಭುವನೇಶ್ವರಿ ಕೋಳಿವಾಡ, ರಾಧಿಕಾ ತೊಂಡಿಹಾಳ, ಯೋಗ ಸಾಧಕ ಯಶವಂತ ಮತ್ತೂರ, ಖಾಸಗಿ ಬ್ಯಾಂಕ್ ವ್ಯವಸ್ಥಾಪಕ ಮಾರುತಿ ಮುಂಡರಗಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net