ರಾಜಕಾಲುವೆ ಮುಚ್ಚಿ ನಿವೇಶನ ನಿರ್ಮಾಣ: ಹೊಸ ಆನಂದೂರು ಗ್ರಾಮಸ್ಥ ಎಚ್.ಎಸ್.ರಘು ಬೇಸರ

Hosa Ananduru)
Published on

ಮಂಡ್ಯ: ಮಳೆ ಬಂದಂತಹ ಸಮಯದಲ್ಲಿ ಅನುಕೂಲವಾಗಲೆಂದು ಮಹಾರಾಜರ ಕಾಲದಲ್ಲಿ ನಿರ್ಮಿಸಿದ್ದ ರಾಜಕಾಲುವೆ(ಪೂರ್ಣಪ್ರಸನ್ನ ನಾಲೆ)ಯನ್ನು ಕೆಲ ಪ್ರಭಾವಿಗಳು ಮುಚ್ಚಿ ತಂತಿ ಬೇಲಿ ಹಾಕಿಸಿ ನಿವೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಶ್ರೀರಂಗಪಟ್ಟಣ ತಾಲೂಕು ಹೊಸ ಆನಂದೂರು ಗ್ರಾಮಸ್ಥ ಎಚ್.ಎಸ್.ರಘು ಗಂಭೀರ ಆರೋಪ ಮಾಡಿದರು.

ಗ್ರಾಮದ ಸರ್ವೇ ನಂ 986ರ ಜಮೀನು ಖರೀದಿ ಮಾಡಿರುವ ಚೇತನ್‌ಕುಮಾರ್, ಮುರುಳಿಧರ್ ಹಾಗೂ ರೇವಣ್ಣ ಎಂಬುವವರು ತಾವು ಖರೀದಿ ಮಾಡಿದ ಜಮೀನಿಗೆ ಹೊಂದಿಕೊಂಡಿರುವ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿವೇಶನವನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಸುಮಾರು 10 ಎಕರೆ ವಿಸ್ತೀರ್ಣವುಳ್ಳ ರಾಜಕಾಲುವೆಯನ್ನು ಮಣ್ಣಿನಿಂದ ಮುಚ್ಚಿ, ತಂತಿ ಬೇಲಿ ಹಾಕುವ ಮೂಲಕ ನಿವೇಶನ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದರು.

ಹೊಸ ಆನಂದೂರು ಗ್ರಾಮ ತಗ್ಗು ಪ್ರದೇಶದಲ್ಲಿದೆ. ಒಂದು ವೇಳೆ ಮಳೆ ಬಂದರೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆ ನಿರ್ಮಾಣ ಮಾಡಲಾಗಿತ್ತು. ಸುಮಾರು 8 ಅಡಿ ಆಳ, 25 ಅಡಿ ಅಗಲವಿರುವ ರಾಜಕಾಲುವೆಯನ್ನು ಇದೀಗ ಸಾವಿರಾರೂ ಲಾರಿಯಲ್ಲಿ ಮಣ್ಣು ತಂದು ಮುಚ್ಚಲಾಗಿದೆ. ಈ ಬಗ್ಗೆ ಕೆಆರ್‌ಎಸ್ ಠಾಣೆ ಪೊಲೀಸರು, ಬೆಳಗೊಳ ಗ್ರಾಮ ಪಂಚಾಯಿತಿ ಪಿಡಿಒ, ಉಪತಹಸೀಲ್ದಾರ್ (ನಾಡ ಕಚೇರಿ), ತಹಸೀಲ್ದಾರ್ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ಜತೆಗೆ ನನಗೆ ನಿಂದಿಸುತ್ತಾರೆಂದು ಅಳಲು ತೋಡಿಕೊಂಡರು.

ಫೆಬ್ರವರಿಯಲ್ಲಿ ಒತ್ತುವರಿ ಮಾಡಲಾಗಿದೆ. ದೂರು ನೀಡಿ ತಿಂಗಳು ಸಮೀಪಿಸಿದರೂ ಅಧಿಕಾರಿಗಳು ಸ್ಥಳ ಪರೀಶಿಲನೆ ಮಾಡಿಲ್ಲ. ಹಲವು ಬಾರಿ ತಹಸೀಲ್ದಾರ್ ಕಚೇರಿಗೆ ಅಲೆದರೂ ಪ್ರಯೋಜನವಾಗಲಿಲ್ಲ. ಯಾವ ಇಲಾಖೆಗೆ ಹೋದರೂ ಕೂಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ನಾವು ಯಾರ ಬಳಿ ಹೋಗಬೇಕೆಂದು ಪ್ರಶ್ನಿಸಿದರು. ಆದ್ದರಿಂದ ಮೇಲಧಿಕಾರಿಗಳು ರಾಜಕಾಲುವೆ ಒತ್ತುವರಿ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ರೈತಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಬಂಡವಾಳಶಾಹಿ ಹಾಗೂ ಭೂ ಕಬಳಿಕೆದಾರರ ಕಪಿಮುಷ್ಠಿಗೆ ಸಿಲುಕುತ್ತಿದ್ದಾರೆ. ರಾಜಕಾಲುವೆ ಮುಚ್ಚಿರುವುದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದಾರಂತೆ. ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ವಹಿಸಿಲ್ಲ. ಆದ್ದರಿಂದ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಜತೆಗೆ ಸಂಘದಿಂದ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಮುಖಂಡ ಆನಂದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net