ದೇವಾಲಯದ ಜೀಣೋದ್ಧಾರಕ್ಕೆ ನಿರ್ಲಕ್ಷ್ಯ: ಟ್ರಸ್ಟ್ ಅಧ್ಯಕ್ಷ ಡಿ.ಕೆ.ಶ್ರೀನಿವಾಸಮೂರ್ತಿ ಆಕ್ರೋಶ

Press Meet..
Published on

ಮಂಡ್ಯ: ಮಳೆಯ ಆರ್ಭಟದಿಂದ ಜಿಲ್ಲೆಯಲ್ಲಿ 1200 ಸಿ-ದರ್ಜೆ ದೇವಾಲಯಗಳ ಮೇಲ್ಛಾವಣಿ ಕುಸಿದಿದ್ದು, ಗರ್ಭಗುಡಿಯೊಳಗೆ ಸೋರಿಕೆಯಾಗುತ್ತಿದೆ. ಆದರೂ ಈ ದೇವಾಲಯಗಳ ಜೀರ್ಣೋದ್ಧಾರದ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಿ.ಕೆ.ಶ್ರೀನಿವಾಸಮೂರ್ತಿ ಆರೋಪಿಸಿದರು.

ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿಪತ್ರ ಸಲ್ಲಿಸಿ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆಗೊಳಿಸುವಂತೆ ಕೋರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಜಿಲ್ಲೆಯಲ್ಲಿರುವ ಧಾರ್ಮಿಕ ಪರಿಷತ್‌ಗಳು ಸಿ-ದರ್ಜೆ ದೇವಾಲಯಗಳ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಸರ್ಕಾರ ದೇವಾಲಯದ ಜೀರ್ಣೋದ್ಧಾರಕ್ಕೆ ಕೋಟ್ಯಂತರ ರೂ ಬಿಡುಗಡೆ ಮಾಡುತ್ತದೆ. ಮುಜರಾಯಿ ಇಲಾಖೆ ಸಚಿವರೇ ರಾಜ್ಯ ಸಮಿತಿ ಅಧ್ಯಕ್ಷರಾಗಿದ್ದು, ಆ ಹಣ ಜಿಲ್ಲಾ ಸಮಿತಿಗೆ ಬರುವ ಮುನ್ನವೇ ಖಾಸಗಿ ದೇವಾಲಯಗಳಿಗೆ ಹಂಚಿಕೆ ಮಾಡಿರುತ್ತಾರೆ. ಪ್ರಭಾವಿಗಳು, ಖಾಸಗಿ ದೇವಾಲಯ ಆಡಳಿತ ಮಂಡಳಿಯವರು ಸರ್ಕಾರದ ಮಟ್ಟದಲ್ಲೇ ಪ್ರಭಾವ ಬೀರಿ ಹಣವನ್ನು ಪಡೆದುಕೊಳ್ಳುತ್ತಿರುವುದರಿಂದ ಸಿ-ದರ್ಜೆ ದೇವಾಲಯಗಳ ಅಭಿವೃದ್ಧಿಗೆ ಹಣವೇ ಸಿಗದಂತಾಗಿದೆ ಎಂದು ದೂರಿದರು.

ಮುಜರಾಯಿ ದೇವಾಲಯಗಳಿಗೆ ರಾಜ್ಯಸರ್ಕಾರವು ತಸ್ತಿಕ್ ಹಣವನ್ನು 60 ಸಾವಿರ ರೂಗೆ ಹೆಚ್ಚಿಸಿದೆ. ಈಗಿನ ಪೇಟೆಧಾರಣೆ ಹೆಚ್ಚಿರುವುದರಿಂದ ಹಾಲಿ ಕೊಡುತ್ತಿರುವ ತಸ್ತಿಕ್ ಹಣ ಸಾಕಾಗುತ್ತಿಲ್ಲ. ಅದಕ್ಕಾಗಿ ತಿಂಗಳಿಗೆ 10 ಸಾವಿರ ರೂ ತಸ್ತಿಕ್ ಹಣವನ್ನು ಹೆಚ್ಚಳ ಮಾಡಿಕೊಡುವಂತೆ ಮನವಿ ಮಾಡಿದ ಅವರು, ಅನಾದಿ ಕಾಲದಿಂದಲೂ ಸಿ-ದರ್ಜೆ ದೇವಾಲಯಗಳಲ್ಲಿ ನಡೆಯುತ್ತಿದ್ದ ಬ್ರಹ್ಮ ರಥೋತ್ಸವ ಮುಜರಾಯಿ ವ್ಯಾಪ್ತಿಗೆ ಸೇರಿದ ಮೇಲೆ ನಿಂತುಹೋಗಿವೆ. ಸಾಮಾನ್ಯ ಸಂಗ್ರಹ ಹಣ ನಿಧಿಯನ್ನು ಶೇ.5ರಷ್ಟು ಹೆಚ್ಚಿಸಿ ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡುವುದರೊಂದಿಗೆ ಎಲ್ಲಿ ಹಣವಿಲ್ಲದೆ ರಥೋತ್ಸವಗಳು ನಿಂತಿವೆಯೋ ಅಲ್ಲಿ ರಥೋತ್ಸವ ನಡೆಯುವಂತೆ ಸರ್ಕಾರವನ್ನು ಕೋರಿರುವುದಾಗಿ ಹೇಳಿದರು.

ಪ್ರಸಾದ್, ಕೆ.ಎನ್.ರಂಗಸ್ವಾಮಿ, ಎಸ್.ಸಂತೋಷ್‌ಕುಮಾರ್, ಲಕ್ಷ್ಮೀನಾರಾಯಣ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net