

ಮಂಡ್ಯ: ಮಳವಳ್ಳಿ ತಾಲೂಕು ಹಲಗೂರು ಕೆರೆಯಂಗಳದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ 15 ಸ್ವಚ್ಛತಾ ಕುಟುಂಬಗಳಿಗೆ ನಿವೇಶನ ನೀಡುವವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸ ಮಾಡದೆ ಹೋರಾಟ ನಡೆಸಲಾಗುವುದು ಎಂದು ಅರುಂಧತಿ ನಾಯಕರ್ ಮಹಾಸಭಾದ ಜಿಲ್ಲಾಧ್ಯಕ್ಷೆ ಕೆ.ನಾಗಮಣಿ ಹೇಳಿದರು.
25 ಕುಟುಂಬಗಳ ಪೈಕಿ 15 ಕುಟುಂಬಗಳು ಸ್ವಚ್ಛತಾ ಕಾರ್ಮಿಕರ ಕುಟುಂಬವಾಗಿದ್ದು, ಸುಮಾರು 25 ವರ್ಷಗಳಿಂದ ಸ್ವಚ್ಛತಾ ಕೆಲಸ ನಿರ್ವಹಿಸುತ್ತಾ ಬಂದರೂ ಇದುವರೆಗೂ ಸ್ವಂತ ನಿವೇಶನವಿಲ್ಲ. ವಸತಿ ಸೌಲಭ್ಯವಿಲ್ಲ. ಪಿಡಿಒ, ಇಒ, ಸಿಇಒ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಲಗೂರು ಕೆರೆಯಂಗಳದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದು, ಕಳೆದ ಐದು ದಿನಗಳಿಂದ ಸುರಿದ ಮಳೆಗೆ ಗುಡಿಸಲುಗಳು ಜಲಾವೃತಗೊಂಡಿವೆ. ಪಾತ್ರೆ, ಬಟ್ಟೆ, ಬದುಕಿನ ಆಧಾರಸ್ತಂಭವಾಗಿರುವ ದಾಖಲೆಗಳು ನೀರು ಪಾಲಾಗಿವೆ. ಊಟ-ಬಟ್ಟೆ ಇಲ್ಲದೆ ನಿರಾಶ್ರಿತರಾಗಿದ್ದಾರೆ. ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿದ್ದರೂ ಅದು ವಾಸ ಮಾಡಲು ಯೋಗ್ಯವಾದ ಸ್ಥಳವಲ್ಲ. ಅಲ್ಲಿ ಕೊಡುತ್ತಿರುವ ಊಟವೂ ಸರಿಯಾಗಿಲ್ಲ. ನಾಲ್ಕು ತಿಂಗಳು ಕಳೆದರೂ ಪಂಚಾಯಿತಿಯಿಂದ ಸಂಬಳ ಕೊಟ್ಟಿಲ್ಲ. ಹೀಗಾದರೆ ಬದುಕು ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ಅವರ ಗಮನಕ್ಕೂ ತಂದಿದ್ದರೂ ಸಹ ಸರ್ಕಾರ ಅಥವಾ ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿ ಅರ್ಹ ಕುಟುಂಬಗಳಿಗೆ ನಿವೇಶನ, ವಸತಿ ದೊರಕಿಸಿಕೊಡುವ ಪ್ರಯತ್ನ ನಡೆಸಿಲ್ಲ. ಜಿಲ್ಲಾಡಳಿತ, ಜನಪ್ರತಿನಿಧಿಗಳು ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿದ್ದು, ಆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಯ ಕೈಗೊಳ್ಳದೆ ಹೋರಾಟ ನಡೆಸುವುದಾಗಿ ಹೇಳಿದರು.
ಭದ್ರಸ್ವಾಮಿ, ನಾಗರಾಜು, ರಮೇಶ್, ರೇಖಾ, ರೇಣುಕಮ್ಮ, ಮಹದೇವಸ್ವಾಮಿ, ಮಂಜುಳಾ ಹಾಜರಿದ್ದರು.