

ಕುಶಾಲನಗರ:
ಕೊಡಗು, ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಶುಂಠಿ ಬೆಳೆಗೆ ಮಾರಕ ರೋಗ ಬಂದಿದ್ದು, ಶುಂಠಿ ಬೆಳೆಗಾರರಿಗೆ ಎಕರೆಗೆ ಮೂರು ಲಕ್ಷ ರೂ.ನÀಂತೆ ಸರ್ಕಾರ ಪರಿಹಾರ ನೀಡಬೇಕು ಎಂದು ಕೊಡಗು, ಮೈಸೂರು ಜಿಲ್ಲೆ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ ಅಧ್ಯಕ್ಷ ಹೆಚ್.ಎನ್. ರಾಜಶೇಖರ್ ಮನವಿ ಮಾಡಿದ್ದಾರೆ.
ಕಳೆದ ಕೆಲವು ಸಮಯದಿಂದ ಈ ರೋಗ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ರೈತ ಸಂಪೂರ್ಣ ಅಸಹಾಯಕರಾಗಿದ್ದಾರೆ. ಇದರಿಂದ ಶುಂಠಿ ಬೆಳೆಗಾರರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ಶುಂಠಿ ಬೆಳೆಗೆ ಈ ಸಾಲಿನಲ್ಲಿ ಅತಿ ಕಡಿಮೆ ಬೆಲೆ ಇದ್ದು ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದು ಕಂಗಾಲಾಗಿದ್ದಾರೆ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಗ್ಗೆ ತಕ್ಷಣ ಸಂಬAಧಿಸಿದ ಕೃಷಿ ಅಧಿಕಾರಿಗಳು ಗಮನಹರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಕ್ಷಣ ಶುಂಠಿ ಬೆಳೆಗಾರರಿಗೆ ಎಕರೆ ಒಂದಕ್ಕೆ ಮೂರು ಲಕ್ಷ ರೂ. ಪರಿಹಾರ ನೀಡಬೇಕು. ರೋಗಭಾದೆ ನಿವಾರಣೆಗೆ ಉಚಿತ ಔಷಧಿ ಒದಗಿಸಬೇಕು. ಜತೆಗೆ ಶುಂಠಿ ಬೆಳೆಗೆ ಚೀಲವೊಂದಕ್ಕೆ ಕನಿಷ್ಠ 2 ಸಾವಿರ ರೂ. ನಿಗದಿಪಡಿಸಬೇಕು.
ಶುಂಠಿ ಬೆಳೆಯಲು ಎಕರೆ ಒಂದಕ್ಕೆ ಸುಮಾರು ಐದರಿಂದ ಆರು ಲಕ್ಷ ರೂ. ಖರ್ಚಾಗುತ್ತಿದ್ದು ಈ ನಿಗೂಢ ರೋಗದಿಂದ ಬಹುತೇಕ ಬೆಳೆ ಹಾನಿಯಾಗುತ್ತಿದೆ. ಕೊಡಗು, ಮೈಸೂರು, ಹಾಸನ ಭಾಗ ಸೇರಿದಂತೆ ವಿವಿಧೆಡೆ ಸುಮಾರು ಲಕ್ಷಾಂತರ ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಶೇ. 60ರಷ್ಟು ರೈತರು ಶುಂಠಿ ಬೆಳೆಯನ್ನು ಅವಲಂಬಿಸಿದ್ದಾರೆ.
ಈ ಬಗ್ಗೆ ಈ ತಿಂಗಳ 23ರಂದು ಕೊಡಗು, ಮೈಸೂರು, ಹಾಸನ ಭಾಗದ ಶುಂಠಿ ಬೆಳೆಗಾರರ ಪ್ರತಿನಿಧಿಗಳು ಕುಶಾಲನಗರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸÀರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಭಾಗದ ರೈತಾಪಿ ವರ್ಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಂಘದ ನಿರ್ದೇಶಕ ಸಿ.ಎ. ರಾಜು, ಕೆ.ಸಿ. ಸತ್ಯ, ಮಲ್ಲಿಕಾರ್ಜುನ ಹಾಗೂ ಅಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.