

ಚಾಮರಾಜನಗರ: ಕಾಡಂಚಿನ ಗ್ರಾಮಗಳಿಗೆ ಇಂದಿಗೂ ಮೂಲ ಸೌಕರ್ಯ ಕಲ್ಪಿಸದ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಆ.15 ರಂದು ಧ್ವಜಾರೋಹಣ ಮಾಡಲು ಬಿಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದರು.
ಜಿಲ್ಲೆಯ ಹನೂರು ಹಾಗೂ ಯಳಂದೂರು ತಾಲೂಕಿನ ಕಾಡಂಚಿನ ಹಲವು ಗ್ರಾಮಗಳು ಇಂದಿಗೂ ಕುಡಿಯುವ ನೀರು, ವಸತಿ, ರಸ್ತೆ, ಕನಿಷ್ಠ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಈ ವರೆಗೂ ಬಂದಿರುವ ಯಾವ ಜಿಲ್ಲಾಧಿಕಾರಿಯೂ ಇತ್ತ ಗಮನಹರಿಸಿಲ್ಲ. ಆಮೆಕೆರೆ ಕಾಡಂಚಿನ ಗ್ರಾಮದಲ್ಲಿ ಸಾಕಷ್ಟು ರೈತರು ಸುಮಾರು 50 ವರ್ಷಗಳಿಂದಲೂ ಜಮೀನು ಮಾಡಿಕೊಂಡು ಬಂದಿದ್ದು, ಈಗ ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಜಮೀನು ಮಾಡದೇ ಬಂದಿದ್ದಾರೆ. ಪರಿಹಾರಕ್ಕಾಗಿ ಸಾಕಷ್ಟು ಮನವಿ ಮಾಡಿದರು ಅಧಿಕಾರಿಗಳು ಸ್ಪಂದಿಸಿಲ್ಲ. ಈ ಕಾರಣಕ್ಕೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧ್ವಜಾರೋಹಣ ಮಾಡಲು ಬಿಡುವುದಿಲ್ಲ ಎಂದು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿರುವ ಹಾಡಿ, ಪೋಡುಗಳಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸಲು ಆಗಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಅಧಿಕಾರಿಗಳು ರೈತರಿಗೆ ದನ-ಕರು ಮೇಯಿಸಲು ಬಿಡುವುದಿಲ್ಲ, ಪಟಾಕಿ ಸಿಡಿಸಿ ತುಂಬಾ ತೊಂದರೆ ಕೊಡುತ್ತಿದ್ದಾರೆ. ಜನರಿಂದ ಅರಣ್ಯ ಅಧಿಕಾರಿಗಳು ಆಧಾರ್ ಕಾರ್ಡ್ ಪಡೆದು ಕಿರುಕುಳ ನೀಡುತ್ತಿದ್ದಾರೆ. ಕಾಡಂಚಿನ ಗ್ರಾಮಗಳ ರೈತರಿಗೆ ವ್ಯವಸಾಯ ಮಾಡಲು ಬಿಡುತ್ತಿಲ್ಲ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪರಿಹಾರವಾಗಿಲ್ಲ ಎಂದು ಆರೋಪಿಸಿದರು.
ಮುಖಂಡ ಡಾ.ಗುರುಪ್ರಸಾದ್ ಮಾತನಾಡಿ, ಈ ಹಿಂದೆ ಕಾಡಂಚಿನ ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಜನ-ವನ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದಿನ ಡಿಸಿಎ್ ಅಧಿಕಾರಿ ಅದನ್ನು ನಿಲ್ಲಿಸಿದ್ದಾರೆ. ಇದರಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ಸರ್ಕಾರಿ ಸವಲತ್ತುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಅಧಿಕಾರಗಳು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಬಾರದು. ಸಮಾಜ ಸೇವೆ ಮಾಡುವವರ ಕೈಯಲ್ಲಿ ಧ್ವಜಾರೋಹಣ ಮಾಡಿಸಲಿ ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಗುಂಬಳ್ಳಿ ರಂಗಸ್ವಾಮಿ, ಅಂಬಳೆ ಶಿವಕುಮಾರ್, ಚುಂಗಡಿ ಕರಿಯಪ್ಪ ಉಪಸ್ಥಿತರಿದ್ದರು.