ಕಾಂಗ್ರೆಸ್ ಪಕ್ಷ ತೊರೆದವರಿಗೆ ಕಾಲವೇ ಉತ್ತರಿಸುತ್ತದೆ

18 mbl ph 1
Published on

ಮುಳಬಾಗಿಲು: ವಿವಾದಿತ ರಾಮಮಂದಿರ ಸ್ಥಳದಲ್ಲಿದ್ದ ಬಾಬ್ರಿ ಮಸೀದಿಯನ್ನು ಕೆಡವಿದಾಗ ಅಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ನೊಂದು ವಿಶ್ವದಲ್ಲೇ ತಲೆ ತಗ್ಗಿಸುವ ಕೆಲಸವಾಗಿದೆ ಎಂದು ಸಂಸತ್‌ನಲ್ಲಿ ಹೇಳಿದ್ದರು. ಇದಕ್ಕೆ ನನ್ನ ಬಳಿ ದಾಖಲೆ ಇದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲಾಗುವುದು. ಈ ಹಿಂದೆ ಮಾಲೂರು, ಕೆಜಿಎಫ್, ಬಂಗಾರಪೇಟೆ, ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. ಆದರೆ, ಈಗ ಪ್ರಬಲವಾಗಿದೆ. ಅದೇ ರೀತಿ ಮುಳಬಾಗಿಲು, ಕೋಲಾರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಕೋಲಾರದ 17 ಲೋಕಸಭಾ ಚುನಾವಣೆಯಲ್ಲಿ 1984 ಮತ್ತು 2019ರ ಚುನಾವಣೆ ಹೊರತುಪಡಿಸಿ ಎಲ್ಲ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ. ಮುಂದೆಯೂ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪಕ್ಷದ ಋಣ ತೀರಿಸುತ್ತೇನೆ ಎಂದರು.

ಜೆಡಿಎಸ್ ಸಹವಾಸ ಕಾಂಗ್ರೆಸ್‌ಗೆ ಉಪವಾಸ: ಜೆಡಿಎಸ್-ಕಾಂಗ್ರೆಸ್ ಸ್ನೇಹಿತರಾಗಿರಬೇಕೇ ಹೊರತು ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳಬಾರದು. ಅಧಿಕಾರ ಹಂಚಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ಮಾಡಬಾರದು ಎಂಬುದು ಸಾಬೀತಾಗಿದೆ. ಜೆಡಿಎಸ್ ಕಣದಲ್ಲಿದ್ದಿದ್ದರೆ ನಾನು ಎಂಪಿಯಾಗಿರುತ್ತಿದ್ದೆ. ಆದರೆ ಅವರೊಂದಿಗೆ ಹೊಂದಾಣಿಕೆಯೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದರು.

ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಮತ್ತು ನಾನು ಉತ್ತಮವಾಗಿಯೇ ಇದ್ದು, ಕೆಲವರು ಇಲ್ಲ ಸಲ್ಲದ ಚಾಡಿ ಹೇಳಿ ಇಬ್ಬರನ್ನೂ ದೂರ ಮಾಡಿದ್ದಾರೆ. ಅವರ ಜಾತಿ ಪ್ರಮಾಣ ಪತ್ರದ ಬಗ್ಗೆ ನನ್ನ ಬಳಿ ಕೆಟ್ಟದಾಗಿ ಹೇಳಿದವರು ಈಗ ಅವರ ಬಳಿಯೇ ಉಳಿದುಕೊಂಡಿದ್ದಾರೆ ಎಂದರು.

ನಿಯತ್ತಿಲ್ಲದ ನಾಗೇಶ್: ಕ್ಷೇತ್ರದಲ್ಲಿ ಏನೂ ಇಲ್ಲದ ಎಚ್.ನಾಗೇಶ್ ಕೇವಲ 8 ದಿನದಲ್ಲಿ ಕಾಂಗ್ರೆಸ್ ಬೆಂಬಲದಿಂದ ಶಾಸಕರಾಗಿ, ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವರಾಗಿ ಬಿಜೆಪಿಗೆ ಜಿಗಿದು ನಂಬಿಕೆ ದ್ರೋಹ ಮಾಡಿದ್ದಾರೆ. ಅವರಿಂದ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ. ರಾಜಕೀಯ ಗಂಧ ಗಾಳಿ ಸಹ ತಿಳಿದಿಲ್ಲ ಎಂದು ಟೀಕಿಸಿದರು.

ಆವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆನಂದರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಬಾಜ್ ಖಾನ್ ಎಂದಿನಂತೆ ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ಕೇಳಿದಾಗ ಹಾರಿಕೆ ಉತ್ತರ ನೀಡಿ ಕೆ.ಎಚ್.ಮುನಿಯಪ್ಪ ಎಲ್ಲವೂ ಸರಿಹೋಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net