ಪತ್ರಿಕಾ ವಿತರಕರೇ ಪತ್ರಿಕೆಗಳ ಜೀವಾಳ | ‘ಸುದ್ದಿಮನೆ ಮತ್ತು ಪತ್ರಿಕಾ ವಿತರಕರು’ ಗೋಷ್ಠಿ | ಹಿರಿಯ ಪತ್ರಕರ್ತರಿಂದ ವಿಚಾರ ಮಂಡನೆ

B V Mallikarjunaiyya
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯಮಟ್ಟದ 37ನೇ ಸಮ್ಮೇಳನದ ‘ಸುದ್ದಿಮನೆ ಮತ್ತು ಪತ್ರಿಕಾ ವಿತರಕರು’ ಕುರಿತ ಗೋಷ್ಠಿ ಉದ್ಘಾಟಿಸಿ ಐಎಫ್‌ಡಬ್ಲ್ಯುಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ: ಪತ್ರಿಕಾ ವಿತರಕರಿಗೆ ಪ್ರತ್ಯೇಕ ನಿಧಿ ಸ್ಥಾಪಿಸಬೇಕು, ಅವರ ಮಕ್ಕಳಿಗೆ ಉಚಿತ ಶಿಕ್ಷಣ ಸೇವೆ ಕಲ್ಪಿಸಬೇಕು, ಆರೋಗ್ಯ ಸೇವಾ ಸೌಲಭ್ಯ ಒದಗಿಸಬೇಕು, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಆಗಬೇಕು, 60 ವರ್ಷ ಮೇಲ್ಪಟ್ಟ ಪತ್ರಿಕಾ ವಿತರಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು, ಅಪಘಾತ ವಿಮೆ ಸೌಲಭ್ಯ ಕಲ್ಪಿಸಬೇಕು..!

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಪತ್ರಕರ್ತರ ರಾಜ್ಯಮಟ್ಟದ 37ನೇ ಸಮ್ಮೇಳನ ಹಿನ್ನೆಲೆ ಭಾನುವಾರ ಆಯೋಜಿಸಿದ್ದ ‘ಸುದ್ದಿಮನೆ ಮತ್ತು ಪತ್ರಿಕಾ ವಿತರಕರು’ ವಿಷಯ ಕುರಿತ ವಿಚಾರ ಗೋಷ್ಠಿಯಲ್ಲಿ ನಾಡಿನ ಹಿರಿಯ ಪತ್ರಕರ್ತರು ಹಂಚಿಕೊಂಡ ಅಭಿಪ್ರಾಯಗಳಿವು.

ಪತ್ರಿಕಾ ವಿತರಕರೇ ಪತ್ರಿಕೋದ್ಯಮದ ಜೀವಾಳ, ಪತ್ರಿಕಾ ವಿತರಕರು ಮತ್ತು ಪತ್ರಕರ್ತರ ಮಧ್ಯೆ ಅವಿನಾಭಾವ ಸಂಬಂಧವಿದೆ. ಪತ್ರಿಕಾ ವಿತರಕರಿಗೆ ಸರ್ಕಾರದ ಸೌಲಭ್ಯ ಅಗತ್ಯ, ಪ್ರತ್ಯೇಕ ನಿಧಿ ಸ್ಥಾಪನೆ ಅವಶ್ಯ, ಆರೋಗ್ಯ ಸೇವೆ ಕಲ್ಪಿಸುವ ವ್ಯವಸ್ಥೆಯಾಗಬೇಕು, ಕೋವಿಡ್ ಸಂದರ್ಭ ಪತ್ರಿಕಾ ವಿತರಕರು ಸಲ್ಲಿಸಿದ ಸೇವೆ ಅಮೋಘ ಎಂದು ಬಣ್ಣಿಸಲಾಯಿತು.

ಐಎಫ್‌ಡಬ್ಲ್ಯುಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಿಕಾ ವಿತರಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು.

ಪತ್ರಿಕಾ ವಿತರಕರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಕ್ಕೆ ಒಂದು ಪ್ರತ್ಯೇಕ ನಿಧಿ ಸ್ಥಾಪಿಸಬೇಕು. ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಗ್ರಾಮಾಂತರ ಪತ್ರಕರ್ತರು ಹಲವು ಸಮಸ್ಯೆಗಳ ಸುಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬ ವರ್ಗ ಮರೆತು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಪತ್ರಿಕಾ ವಿತರಕರು ಸಹ ಕೆಲಸ ಮಾಡುತ್ತಾರೆ. ಈ ಎರಡು ವರ್ಗಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಕೊಡಲು ನಾವು ಬದ್ಧರಾಗಿದ್ದೇವೆ ಎಂದರು.

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಮಾತನಾಡಿ, ಪತ್ರಿಕಾ ವಿತರಕರ ಬಗೆಗೆ ಯಾರೂ ಧ್ವನಿ ಎತ್ತಲಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ಸಂಘಟನೆಗಳಿದ್ದವು. ಕೋವಿಡ್ ಸಂದರ್ಭದಲ್ಲಿ ಪತ್ರಿಕಾ ವಿತರಕರು ಎದುರಿಸಿದ ಸವಾಲುಗಳ ಬಗ್ಗೆ ಯಾರೂ ಗಮನಹರಿಸಲಿಲ್ಲ. ಆಗ ಪತ್ರಿಕಾ ವಿತರಕರ ಒಕ್ಕೂಟ ರಚಿಸುವ ಸಂದರ್ಭ ಒದಗಿ ಬಂತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 18 ಜಿಲ್ಲೆಗಳಲ್ಲಿ ನಮಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ನಾವು ಒಟ್ಟಾಗಿ ನಮ್ಮ ಸೌಲಭ್ಯಗಳಿಗೆ ಹೋರಾಡುತ್ತೇವೆ ಎಂದರು.

ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಬೇಕು. ವಿತರಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಐವತ್ತು ಅರವತ್ತು ವರ್ಷ ವಯಸ್ಸಿನ ಪತ್ರಿಕಾ ವಿತರಕರು ಕಾರ್ಯ ನಿರ್ವಹಿಸುತ್ತಿದ್ದು ಅಂಥವರಿಗೆ ಪಿಂಚಣಿ, ಉಚಿತ ಆರೋಗ್ಯ ವಿಮೆ, ಅಪಘಾತ ವಿಮೆಯಂತಹ ಸೌಲಭ್ಯ ಕಲ್ಪಿಸಿಕೊಡುವ ವ್ಯವಸ್ಥೆ ಆಗಬೇಕು ಎಂದರು.

ಮಾಧ್ಯಮ ಅಕಾಡೆಮಿ ಸದಸ್ಯ ಸಿ.ಕೆ. ಮಹೇಂದ್ರ ಮಾತನಾಡಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿತ್ತು. ಇದರ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕಿದೆ. ಈ ಕೆಲಸ ಸಾಧ್ಯವಾದಷ್ಟು ಬೇಗ ಆಗಬೇಕು ಎಂದರು.

ಕೆ. ಶಿವಕುಮಾರ ಮಾತನಾಡಿ, ಪತ್ರಿಕಾ ವಿತರಕರ ಸಂಘಗಳು ಎಲ್ಲ ಜಿಲ್ಲೆಗಳಲ್ಲೂ ಸ್ಥಾಪನೆಯಾಗಬೇಕು. ಇದು ಅತ್ಯಂತ ಸವಾಲಿನ ಕೆಲಸ. ಇಲ್ಲಿ ಕೆಲವು ಗೊಂದಲಗಳಿವೆ. ಈ ಗೊಂದಲಗಳ ನಿವಾರಣೆ ಮಾಡಿ ಸಂಘಗಳನ್ನು ಬಲಪಡಿಸಬೇಕು ಎಂದರು.

ದೇವೇಂದ್ರಪ್ಪ ಕಪನೂರ, ಜಗನ್ನಾಥ ಶೆಟ್ಟಿ ವಿಚಾರ ಮಂಡಿಸಿದರು. ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಎನ್. ರವಿಕುಮಾರ ಟೆಲೆಕ್ಸ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net