ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು ಪತ್ರಿಕೋದ್ಯಮದ ಕೆಲಸವಲ್ಲ; ಪ್ರೊ.ಬಿ.ಕೆ.ರವಿ ಹೇಳಿಕೆ

MEDIA
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಉದ್ಘಾಟಿಸಿದರು. ಪ್ರಾಚಾರ್ಯೆ ಜಯದೇವಿ ಎಂ.ಕಲಶೆಟ್ಟಿ, ಸಂಯೋಜಕ ಖಾಜಾಸಾಬ್ ಗಡಾದ್ ಇತರರಿದ್ದರು.
Published on

ಗಂಗಾವತಿ: ಮಾಧ್ಯಮ ಲೋಕದಲ್ಲಿ ಯಶಸ್ಸಿಗೆ ಜ್ಞಾನ ಸಂಪಾದನೆ ಮುಖ್ಯವಾಗಿದ್ದು, ವಿನಯ, ವಿಧೇಯತೆ ಮತ್ತು ಶ್ರದ್ಧೆಯಿಂದ ಸಾಧನೆ ಸಾಧ್ಯ ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಸಲಹೆ ನೀಡಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನದಿಂದ ಕನ್ನಡ ಪತ್ರಿಕೋದ್ಯಮ ಶರವೇಗದಲ್ಲಿ ಬೆಳೆಯುತ್ತಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ನಿರಂತರ ಅಧ್ಯಯನದ ಜತೆಗೆ ಭಾಷೆ ಮೇಲೆ ಹಿಡಿತ ಸಾಧಿಸಬೇಕು. ಬರವಣಿಗೆ ಹವ್ಯಾಸ ಮಾಡಿಕೊಳ್ಳಬೇಕಿದ್ದು, ಸಾರ್ವಜನಿಕರಿಗೆ ಗೊಂದಲ ಮೂಡಿಸುವುದು ಪತ್ರಿಕೋದ್ಯಮದ ಕೆಲಸವಲ್ಲ. ಸುದ್ದಿ ಸಂಪಾದನೆಯಲ್ಲಿ ಪೂರಕ ಮಾಹಿತಿ ಮುಖ್ಯ. ತಂತ್ರಜ್ಞಾನದ ವೈಭವೀಕರಣ ಮಾಡದೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಂಚಾಲಕ ಡಾ.ಜಾಜಿ ದೇವೇಂದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಎಸ್‌ಕೆಎನ್‌ಜಿ ಕಾಲೇಜು ಬಳ್ಳಾರಿ ವಿವಿಯಲ್ಲಿ ಇದುವರೆಗೂ 11 ಚಿನ್ನದ ಪದಕ ಪಡೆದಿದ್ದು, ಮುಂದಿನ ದಿನಗಳಲ್ಲಿ ಕೊಪ್ಪಳ ವಿವಿಯಲ್ಲೂ ಇದೇ ಸಾಧನೆ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ರಚಿಸಲಾದ ಪ್ರಾಯೋಗಿಕ ಯುವ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕಲ್ಯಾಣ ಕರ್ನಾಟಕ ಮತ್ತು ಪತ್ರಿಕೋದ್ಯಮದ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಳ್ಳಾರಿಯ ಸಿ.ಮಂಜುನಾಥ್ ಉಪನ್ಯಾಸ ನೀಡಿದರು.

ಪ್ರಾಚಾರ್ಯೆ ಜಯದೇವಿ ಎಂ.ಕಲಶೆಟ್ಟಿ, ಹೊಸಪೇಟೆ ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಚೌಡ್ಕಿ, ಪತ್ರಿಕೋದ್ಯಮ ವಿಭಾಗದ ಸಂಯೋಜಕ ಖಾಜಾಸಾಬ್ ಗಡಾದ್, ವಿಭಾಗದ ಉಪನ್ಯಾಸಕರಾದ ತಾಯಪ್ಪ ಮರ್ಚೇಡ್, ಹುಲಿಗೆಮ್ಮ, ಡಾ.ಸಿಬಾರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net