

ಮಂಡ್ಯ: ಸಾರ್ವಜನಿಕರಿಗೆ ಆಘಾತ ತರುವ ಹಾಗೂ ಜಿಲ್ಲೆಯ ಹಿತಕ್ಕೆ ಧಕ್ಕೆ ತರುವ ವಿಷಯಗಳನ್ನು ಕಡೆಗಣಿಸುವ ಮೂಲಕ ಸದೃಢ ಸಮಾಜ ಮತ್ತು ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಜೀವಮಾನ ಸಾಧನೆ, ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಬದ್ಧವಾಗಿ ಮಾಧ್ಯಮ ಕೆಲಸ ಮಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ಇಲ್ಲವಾದರೆ ನ್ಯಾಯ ಒದಗಿಸಲು ಪತ್ರಕರ್ತರಿಗೆ ಕಷ್ಟವಾಗುತ್ತದೆ. ಮಾನವೀಯ ಮೌಲ್ಯ, ಸತ್ಯ ಹೇಳುವುದು ಇಲ್ಲಿ ಮುಖ್ಯವಾಗಬೇಕು ಎಂದರು.
ಮಾಧ್ಯಮ ಸ್ನೇಹಿತರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರ 12 ಸಾವಿರ ರೂ ಪಿಂಚಣಿ, ನಿಧನರಾದ ಪತ್ರಕರ್ತರಿಗೆ 5 ಲಕ್ಷ ಪರಿಹಾರ ರೂ ನೀಡಲಾಗುತ್ತಿದೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ನೀಡುವ ಘೋಷಣೆ ಮಾಡಲಾಗಿದ್ದು, ಇದನ್ನು 100 ಕಿ.ಮೀ ವ್ಯಾಪ್ತಿಗೆ ಹೆಚ್ಚಿಸಲು ಮುಖ್ಯಮಂತ್ರಿ ಜತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, 1991-92ರಿಂದಲೂ ಸಕ್ರಿಯ ರಾಜಕಾರಣದಲ್ಲಿ ಚಲುವರಾಯಸ್ವಾಮಿ ಮತ್ತು ನಾನು ಸ್ನೇಹಿತರು. ಪತ್ರಕರ್ತರು ಚಾವಟಿ ಹಿಡಿದುಕೊಂಡಿರುವ ಕಾರಣ ಪ್ರತಿಯೊಬ್ಬ ರಾಜಕಾರಣಿ ಸನ್ಮಾರ್ಗದಲ್ಲಿ ನಡೆಯುತ್ತಾರೆ. ಕೋವಿಡ್ ಕಾಲದಲ್ಲಿ ಪ್ರಾಣದ ಹಂಗು ತೊರೆದು ಪತ್ರಕರ್ತರು ನಮ್ಮೊಂದಿಗೆ ಕೈ ಜೋಡಿಸಿ ದುಡಿದಿದ್ದಾರೆ. ಸಂಕಷ್ಟದಲ್ಲಿರುವ ಪತ್ರಕರ್ತರ ಮಕ್ಕಳಿಗೆ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲು ಬದ್ಧನಾಗಿದ್ದೇನೆ ಎಂದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮಾತನಾಡಿ, ಹುಡುಕಿಕೊಂಡು ಹೋಗಿ ಸುದ್ದಿ ಮಾಡುವ ಕಾಲದಿಂದ ಈಗ ಕಲ್ಪನೆ ಮಾಡಿಕೊಂಡು ಸುದ್ದಿ ಮಾಡುವ ಮಟ್ಟಿಗೆ ತಲುಪಿದ್ದೇವೆ. ಮೊದಲು ಸುದ್ದಿ ಮಾಡುವ ಮುನ್ನ ಹಲವು ಬಾರಿ ಚರ್ಚಿಸಲಾಗುತ್ತಿತ್ತು. ಈಗ ಆ ವ್ಯವಧಾನವೇ ಇಲ್ಲವಾಗಿದೆ. ಬಜೆಟ್‌ನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 10 ಕೋಟಿ ರೂ ಇಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಯೋಜನೆ ಘೋಷಣೆ ಮಾಡಿದ್ದು, ಪ್ರಾಯೋಗಿಕವಾಗಿ ಕೊಟ್ಟಿರುವ ನಿಬಂಧನೆಗಳನ್ನು ಸಡಿಲಗೊಳಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಂತೆಯೇ ಕೆಆರ್‌ಎಸ್‌ನಲ್ಲಿ ಅಕ್ಟೋಬರ್‌ನಲ್ಲಿ ಪತ್ರಕರ್ತರಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರವಿಕುಮಾರ್ ಗಣಿಗ, ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಂ, ಕೆರಗೋಡು ಸೋಮಶೇಖರ್, ಮಾಜಿ ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷರಾದ ನವೀನ್‌ಕುಮಾರ್, ಗಣಂಗೂರು ನಂಜೇಗೌಡ, ರವಿ ಸಾವಂದಿಪುರ, ಪ್ರಧಾನ ಕಾರ್ಯದರ್ಶಿ ಆನಂದ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಕೆ.ಎನ್.ರವಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಯನ್ನು ಎಲ್.ಕೃಷ್ಣ, ಎಸ್.ಡಿ.ವೇಣುಗೋಪಾಲ್, ಎಂ.ಆರ್.ಚಕ್ರಪಾಣಿ, ಕೆಆರ್‌ಎಸ್ ದೀಪಕ್, ಶಿವಮಲ್ಲು ಅವರಿಗೆ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.