ಸುದ್ದಿಯಲ್ಲಿ ಸತ್ಯ, ನ್ಯಾಯದ ಅನಾವರಣ : ಪತ್ರಿಕಾ ದಿನಾಚರಣೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅನಿಸಿಕೆ

press day
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಪ್ರಜಾಪ್ರಭುತ್ವದ ಎಲ್ಲ ಅಂಗಗಳಿಗೆ ಕನ್ನಡಿ ಹಿಡಿದು ಸರಿತಪ್ಪುಗಳನ್ನು ಎತ್ತಿ ತೋರಿಸಿ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿಕೊಂಡಿರುವ ಪತ್ರಿಕೆಗಳು ವರದಿ ಪ್ರಕಟಿಸುವ ವೇಳೆ ಸತ್ಯ, ಧರ್ಮ, ನ್ಯಾಯದ ಅನಾವರಣವಾಗುವಂತಾಗಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಪತ್ರಿಕೆಗಳು ಸತ್ಯಾಸತ್ಯತೆ ಅರಿತು ವರದಿ ಮಾಡಿದಾಗ ಜನರು ಪತ್ರಿಕೆಗಳ ಮೇಲೆ ಇಟ್ಟಿರುವ ವಿಶ್ವಾಸ ವೃದ್ಧಿಯಾಗುತ್ತದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾಹಿತಿಯ ಕೊರತೆಯಿಂದ, ಗ್ರಹಿಕೆಯ ಕೊರತೆಯಿಂದ ಸುದ್ದಿಗಳು ತಪ್ಪಾಗಿ ಪ್ರಕಟವಾಗದಂತೆ ಮಾಧ್ಯಮಗಳು ಜಾಗ್ರತೆ ವಹಿಸಬೇಕು ಎಂದರು.

ಹಿರಿಯ ಪತ್ರಕರ್ತ ಜೆ.ಕೆ.ರೈ ದಂಪತಿಯನ್ನು ಸನ್ಮಾನಿಸಲಾಯಿತು. ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ದಯಾನಂದ ಕಲ್ನಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಸ್ವಾಗತಿಸಿದರು. ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ ವಂದಿಸಿದರು. ಗೌರವಾಧ್ಯಕ್ಷ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net