ಪತ್ರಿಕೋದ್ಯಮ ಸಮಾಜದ ಪರಿವರ್ತನೆಯ ಅಂಗ : ಶಾಸಕ ಹರೀಶ್ ಪೂಂಜ ಅನಿಸಿಕೆ

pathrika dinacharane
ಪತ್ರಿಕಾ ದಿನಾಚರಣೆಯಲ್ಲಿ ಶಾಸಕ ಹರೀಶ್ ಪೂಂಜ ಮಾತನಾಡಿದರು. ಇಸ್ರೋದ ಹಿರಿಯ ವಿಜ್ಞಾನಿ ಪಿ.ವಾಸುದೇವ ರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪತ್ರಿಕೆ, ಮಾಧ್ಯಮಗಳು ಸಮಾಜದ ಪರಿವರ್ತನೆಯ ಪ್ರಮುಖ ಅಂಗ. ತನ್ನದೇ ಆದ ಜವಾಬ್ದಾರಿಯ ಕೆಲಸ ಮಾಡುವ ಪತ್ರಿಕೋದ್ಯಮಕ್ಕೆ ಸರ್ಕಾರ ತಲೆ ಬಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಶನಿವಾರ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಇಸ್ರೋದ ಹಿರಿಯ ವಿಜ್ಞಾನಿ ಪಿ.ವಾಸುದೇವ ರಾವ್ ಮಾತನಾಡಿ, ಜನ ಸಾಮಾನ್ಯರನ್ನು ಗುರುತಿಸುವ ಪತ್ರಿಕೋದ್ಯಮದ ಕಾರ್ಯ ಶ್ಲಾಘನೀಯ. ಸಾಧನೆ ಒಬ್ಬರಿಂದ ಸಾಧ್ಯವಿಲ್ಲ. ಇದಕ್ಕೆ ಹಲವು ಕೈಗಳ ಸಹಕಾರ ಬೇಕು. ಹಿಂದಿನ ಸಾಧಕರು ನೀಡಿದ ಕೊಡುಗೆ ಇಂದಿನ ಸಾಧನೆಗೆ ಅಡಿಪಾಯ. ಇಸ್ರೊದಲ್ಲಿ ಶೇ.40 ಉದ್ಯೋಗಿಗಳು ಕನ್ನಡ ಮಾಧ್ಯಮದಿಂದ ಬಂದವರು ಎಂದರು.

ಪತ್ರಕರ್ತೆ ಉಮಾ ಅನಂತ್ ಉಪನ್ಯಾಸ ನೀಡಿ, ಗ್ರಾಮಾಂತರ ಪತ್ರಿಕೋದ್ಯಮ ಇಂದು ಉತ್ತಮವಾಗಿ ಮೂಡಿ ಬರುತ್ತಿದೆ. ಜನರ ಆಶೋತ್ತರಳಿಗೆ ಪೂರಕ ಕೆಲಸ ಮಾಡುತ್ತಿವೆ. ಸಾಮಾಜಿಕ ಪರಿವರ್ತನೆಗೆ ಪತ್ರಿಕೆಗಳು ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿವೆ.ಪತ್ರಿಕಾ ವೃತ್ತಿಯಲ್ಲಿ ಸಾಕಷ್ಟು ಸವಾಲುಗಳಿವೆ.ಅವುಗಳನ್ನು ಎದುರಿಸಿ ಮುನ್ನಡೆದರೆ ಉತ್ತಮ ಪತ್ರಕರ್ತನಾಗಿ ಮೂಡಿಬರಲು ಸಾಧ್ಯ. ಸಂಪೂರ್ಣ ಜ್ಞಾನವಿದ್ದವರು ಉತ್ತಮ ಪತ್ರಕರ್ತರಾಗಬಹುದು. ಎಲೆಮರೆಯ ಕಾಯಿಗಳು ಪತ್ರಿಕೆ, ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತವೆ. ಇಂಥವರ ಭವಿಷ್ಯ ರೂಪಿಸಲು ಇದು ಸಹಕಾರಿ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಸಾಮಾಜಿಕ ಜವಾಬ್ದಾರಿ ಜತೆ ತಾಲೂಕು ಪತ್ರಕರ್ತರ ಸಂಘ ಕಾರ್ಯ ನಿರ್ವಹಿಸುತ್ತಿದೆ. ಕ್ರಿಯಾಶೀಲವಾಗಿ ಮುಂದುವರಿದು ಇತರರಿಗೆ ಮಾದರಿಯಾಗಿದೆ ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಎಸ್.ಡಿ.ಎಂ.ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.

ಕಾರ್ಯದರ್ಶಿ ಗಣೇಶ್ ಬಿ.ಶಿರ್ಲಾಲು ಸ್ವಾಗತಿಸಿದರು. ಉಪಾಧ್ಯಕ್ಷ ಶಿಬಿ ಧರ್ಮಸ್ಥಳ ವಂದಿಸಿದರು. ಜತೆ ಕಾರ್ಯದರ್ಶಿ ಮನೋಹರ ಬಳಂಜ ನಿರೂಪಿಸಿದರು. ಅಚುಶ್ರೀ ಬಾಂಗೇರು, ಹೃಷಿಕೇಶ್ ಧರ್ಮಸ್ಥಳ ಅತಿಥಿಗಳನ್ನು ಪರಿಚಯಿಸಿದರು. ದೀಪಕ್ ಆಠವಳೆ ಸಂದೇಶ ವಾಚಿಸಿದರು.

ಸಾಧಕರಿಗೆ ಗೌರವ

ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅಂಕಗಳಿಸಿದ ಕಲ್ಮಂಜ ಪ್ರೌಢಶಾಲೆಯ ತನುಶ್ರೀ, ಕಾಯರ್ತಡ್ಕ ಪ್ರೌಢಶಾಲೆಯ ಮೇಘನಾ ಹಾಗೂ ಮಚ್ಚಿನ ಪ್ರೌಢಶಾಲೆಯ ಮೊಹಮ್ಮದ್ ಜಿಯಾದ್ ಅವರನ್ನು ಗೌರವಿಸಲಾಯಿತು. ಸಂಕಷ್ಟದಲ್ಲಿರುವ ಆರು ಕುಟುಂಬಗಳಿಗೆ ಮನೋಹರ್ ಬಳಂಜ ಹಾಗೂ ಲಿಖಿತಾ ದಂಪತಿ ನೀಡುವ ’ದಿತಿ ಸಾಂತ್ವನ ನಿಧಿ’ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net