

ಔರಾದ್: ಪತ್ರಕರ್ತರು ಮತ್ತು ಪತ್ರಿಕೆ ಸಾಮಾಜಿಕ ನ್ಯಾಯಕ್ಕಾಗಿ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ತಾಲೂಕು ಪಂಚಾಯಿತಿ ಸಂಕೀರ್ಣದಲ್ಲಿ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಅವರು, ಸಮಾಜದಲ್ಲಿ ನಿರೀಕ್ಷೆಗಳು ಹುಸಿಯಾದಾಗ ಜನಸಾಮಾನ್ಯರಿಗೆ ನ್ಯಾಯದ ಭರವಸೆ ಮೂಡಿಸಿ ಅವರ ಏಳಿಗೆಗಾಗಿ ಶ್ರಮಿಸುವುದೇ ಪತ್ರಕರ್ತರ ಜವಾಬ್ದಾರಿ ಎಂದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಉಪನ್ಯಾಸ ನೀಡಿ, ಪತ್ರಕರ್ತರು ಸಮಾಜ ಸೇವಕರೇ ಹೊರತು, ಅಧಿಪತಿಗಳಲ್ಲ. ಜನರ ನಿರೀಕ್ಷೆ ಹುಸಿಯಾಗದಂತೆ ಆತ್ಮಾವಲೋಕನ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಿಂದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ತೀರ ಹಿನ್ನಡೆ ಉಂಟಾದರೂ ಪತ್ರಿಕಾ ರಂಗದ ವಿಶ್ವಾಸಾರ್ಹತೆಗೆ ಯಾವತ್ತೂ ಧಕ್ಕೆ ಬಂದಿಲ್ಲ. ಸಮಾಜ ಪತ್ರಕರ್ತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಭಯ, ಆಡಂಬರ, ಪ್ರತಿಷ್ಠೆ ಪತ್ರಕರ್ತರ ಹತ್ತಿರಕ್ಕೂ ಸುಳಿಯಬಾರದು ಎಂದು ಹೇಳಿದರು.
ಕೆಎಂಜೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ನಕಿರೆಕಂಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಸವಲಿಂಗ ದೇವರು, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒ ಸುದೇಶ ಕುಮಾರ, ಶಿವಕುಮಾರ ಘಾಟೆ, ಎಪಿಎಂಸಿ ಅಧ್ಯಕ್ಷ ಧೋಂಡಿಬಾ ನರೋಟೆ, ಹಿರಿಯ ಪತ್ರಕರ್ತ ಅನೀಲಕುಮಾರ ದೇಶಮುಖ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಶಿವಾಜಿ ಪಾಟೀಲ್, ಸಂಘದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ, ತಾಲೂಕು ಅಧ್ಯಕ್ಷ ಸಂತೋಷ ಚಾಂಡೇಶ್ವರೆ, ಬಸವರಾಜ ಶಿವಪೂಜೆ, ರವೀಂದ್ರ ಮುಕ್ತೆದಾರ, ರಾಮದಾಸ ಪಾಟೀಲ್, ಶಿವಕುಮಾರ ಬಿರಾದಾರ, ಶಿವಾನಂದ ಬೇಂದ್ರೆ, ಅಂಕುಶ ವಾಡಿಕರ, ಬಾಲಾಜಿ ಫಿರಂಗೆ, ಸಂದೀಪ ಪಾಟೀಲ್, ಅಮರ ಮುಕ್ತೆದಾರ, ಸಂತೋಷ ದಿಂಡೆ, ಪ್ರಭುಲಿಂಗ, ಲಕ್ಷ್ಮಣ, ಶಿವರಾಜ, ದಯಾನಂದ ಬಿರಾದಾರ ಇತರರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ಶಿಕ್ಷಕ ಬಿ.ಎಂ ಅಮರವಾಡಿ ನಿರೂಪಣೆ ಮಾಡಿದರು. ತಾಲೂಕಿನ ಎಲ್ಲ ಪತ್ರಿಕೆ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮದವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು.
ಸಮಾಜದ ಪ್ರತಿಯೊಂದು ವಿದ್ಯಮಾನದ ಬಗ್ಗೆ ಅರಿವು ಮೂಡಿಸುವುದು ಪತ್ರಿಕಾ ಮಾಧ್ಯಮದ ಕರ್ತವ್ಯ. ಪತ್ರಕರ್ತರ ಅನುಕೂಲಕ್ಕೆ ಜೀವ ವಿಮೆಯಂತಹ ಸೌಲಭ್ಯ ನೀಡಲು ಸರ್ಕಾರ ಯೋಚಿಸಬೇಕಾಗಿದೆ. ನಾನು ಕೂಡ ಈ ಬಗ್ಗೆ ಪ್ರಸ್ತಾಪನೆ ಸಲ್ಲಿಸುವೆ. ತಾಲೂಕಿನಲ್ಲಿ ಪತ್ರಿಕಾ ಭವನ ಇಲ್ಲದಿರುವುದು ಗಮನಕ್ಕಿದ್ದು, ನಿವೇಶನ ದೊರೆತಲ್ಲಿ ಶೀಘ್ರವೇ ನಿರ್ಮಿಸಿಕೊಡಲು ಸಿದ್ಧ.
| ಪ್ರಭು ಚವ್ಹಾಣ್ ಶಾಸಕ