

ಮಂಡ್ಯ: ಮಳವಳ್ಳಿ ತಾಲೂಕು ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ರಾಮಮಂದಿರ ಸೇವಾ ಸಮಿತಿ ವತಿಯಿಂದ ಶ್ರೀರಾಮಮಂದಿರ ಮತ್ತು ನವಗ್ರಹ ದೇವರ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಮಹೋತ್ಸವವನ್ನು ಆ.1ರಂದು ಬೆಳಗ್ಗೆ 10ಗಂಟೆಗೆ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ತಿಳಿಸಿದರು.
30 ವರ್ಷದ ಹಿಂದೆಯೇ ಅಡಿಪಾಯ ಕಂಡ ರಾಮರ ದೇವಾಲಯವನ್ನು ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ದೇವರ ವಿಗ್ರಹಕ್ಕೆ 6.5 ಲಕ್ಷ ರೂ ಹಾಗೂ ಅಲ್ಲಿಯೇ ಇದ್ದ ಕೊಳಕ್ಕೆ ಕಲ್ಯಾಣಿ ರೂಪ ನೀಡಲು 25 ಲಕ್ಷ ರೂ ವ್ಯಯಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಜು.30 ಮತ್ತು 31ರಂದು ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. 1ರಂದು ಮುಂಜಾನೆ 4ಗಂಟೆಯಿಂದ ಪ್ರಾರಂಭವಾಗುವ ಬ್ರಾಹ್ಮೀ ಮುಹೂರ್ತದಲ್ಲಿ ರಾಮ ಸೀತೆ, ಲಕ್ಷ್ಮಣ, ಹನುಮ, ಗಣಪತಿ, ನವಗ್ರಹ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ. ಗ್ರಾಮದ ಗುರುಮಠದ ಸಿದ್ದರಾಮಾರಾಧ್ಯರು, ಸೋಮಶೇಖರ ಆರಾಧ್ಯರು, ದೊಡ್ಡರಾಮಾರಾಧ್ಯರು ವಿಗ್ರಹ ಶಿಲ್ಪಗಾರ ಸೂರ್ಯಪ್ರಕಾಶ್ ಅವರನ್ನು ಸನ್ಮಾನಿಸುವರು ಎಂದು ಹೇಳಿದರು.
ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ, ವಿಶ್ವ ಒಕ್ಕಲಿಗ ಮಠದ ಡಾ.ನಿಶ್ಚಲಾನಂದನಾಥಸ್ವಾಮಿ, ವಿಶ್ವಮಾನವ ಕ್ಷೇತ್ರದ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಮಾನ ಗೋಪುರದ ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್‌ನಾರಾಯಣ್ ನವಗ್ರಹ ದೇವರಿಗೆ ಪುಷ್ಪಾರ್ಚನೆ ಮಾಡುವರು. ಮಾಜಿ ಸಂಸದೆ ಸುಮಲತಾ ಅಂಬರೀಷ್ ಕಲ್ಯಾಣಿಗೆ ಪುಷ್ಪಾರ್ಚನೆ ಮಾಡಲಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ರಾಮಮಂದಿರ ಸೇವಾ ಸಮಿತಿಯ ಅಧ್ಯಕ್ಷ ಎಚ್.ಎಂ.ಮಂಚಯ್ಯ, ಎಚ್.ಎಂ.ಯೋಗೇಶ್, ಎಂ.ಸಿ.ಬಾಲರಾಜು ಇದ್ದರು.