

ಮಂಡ್ಯ: ಮೈಸೂರು ಮುಡಾಕ್ಕೆ ಸಂಬಂಧಿಸಿದಂತೆ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸೆ.13ರಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುವುದು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸದಸ್ಯ ಸುಂಡಹಳ್ಳಿ ಮಂಜುನಾಥ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ರಾಜಭವನವನ್ನು ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಿವೆ. ಮಾತ್ರವಲ್ಲದೆ ಜನರಿಂದ ಆಯ್ಕೆಯಾದ ರಾಜ್ಯಸರ್ಕಾರದ ಮುಖ್ಯಸ್ಥ ಸಿದ್ದರಾಮಯ್ಯ ಅವರ ವಿರುದ್ಧ ನಡೆಯುತ್ತಿರುವ ಪಿತೂರಿಗೆ ರಾಜ್ಯಪಾಲರು ಭಾಗವಾಗಿದ್ದಾರೆ. ಈ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಲೋಕಾಯುಕ್ತ, ಎಸ್‌ಐಟಿ ತನಿಖಾ ಸಂಸ್ಥೆ ಪ್ರಾಥಮಿಕ ತನಿಖೆ ನಡೆಸಿ ತಪ್ಪಿತಸ್ಥರು ಎಂದು ಮೇಲ್ನೋಟಕ್ಕೆ ಸಾಬೀತಾದ ಪ್ರಕರಣದ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಕೋರಿಕೆ ಸಲ್ಲಿಸಿ ವರ್ಷವಾದರೂ ಕ್ರಮ ವಹಿಸಿಲ್ಲ. ಆದ್ದರಿಂದ ಒಕ್ಕೂಟ ತತ್ವ ವಿರೋಧಿಯಾಗಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು. ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಆದೇಶ ಹಿಂಪಡೆಯಬೇಕು ಎಂದ ಒತ್ತಾಯಿಸಿದ ಅವರು, ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸುವ ನೈತಿಕತೆಯನ್ನು ರಾಜ್ಯಪಾಲರು ಕಳೆದುಕೊಂಡಿದ್ದಾರೆ. ಅದರಂತೆ 13ರಂದು ನಡೆಯಲಿರುವ ಮಂಡ್ಯ ವಿವಿ ಘಟಿಕೋತ್ಸವಕ್ಕೆ ಆಗಮಿಸಲಿರುವ ಥಾವರ್‌ಚಂದ್ ಗೆಹಲೋತ್ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಕೆ.ಎಚ್.ನಾಗರಾಜು, ಸಿ.ಎಂ.ದ್ಯಾವಪ್ಪ, ವಿಜಯಲಕ್ಷ್ಮೀ ರಘುನಂದನ್, ಎಂ.ಎಸ್.ರಾಜಣ್ಣ ಇತರರಿದ್ದರು.