ಆ.20ರಂದು ನಗರದಲ್ಲಿ ಮ್ಯಾರಥಾನ್: ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಮಾಹಿತಿ

Press Conference on Marathon Mandya
Published on

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.20ರಂದು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಎಂ.ಸಿದ್ದರಾಜು ಹೇಳಿದರು.

ಡಿ.ದೇವರಾಜ ಅರಸು ಜನ್ಮದಿನದ ಅಂಗವಾಗಿ ಮಂಡ್ಯ ನಗರ ಮತ್ತು ಜಿಲ್ಲೆ ಶ್ರಮಿಕ ನಗರದ ಜನರಿಗೆ ಭೂಮಿ ಮತ್ತು ವಸತಿಗೆ ಆಗ್ರಹ, ಮಹಿಳೆಯರ ಸುರಕ್ಷತೆಗಾಗಿ, ಯುವಜನತೆಯ ಭರವಸೆಯ ಭವಿಷ್ಯಕ್ಕಾಗಿ ಒತ್ತಾಯಿಸಿ ಹೋರಾಟ ಸಮಿತಿ ಮತ್ತು ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟ, ಶ್ರಮಿಕಶಕ್ತಿ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ಸರ್ಕಾರದ ಗಮನ ಸೆಳೆಯಲು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯುವ ಜನರಿಗೆ ಉದ್ಯೋಗ ಹಾಗೂ ಸ್ವಯಂ ಉದ್ಯಮಿಯಾಗಲು ಸರ್ಕಾರ ನೆರವು ನೀಡುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಎಲ್ಲ ಶ್ರಮಿಕನಗರದಲ್ಲಿ ಹೆಣ್ಣು ಭ್ರೂಣ ಹತ್ಯೆ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶ್ರಮಿಕನಗರ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಸೇರಿದಂತೆ 9 ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.

ವಿವಿಧ ಸಂಘಟನೆಗಳ ಜಿ.ಪೂರ್ಣಿಮಾ, ಶಿಲ್ಪಾ, ಪ್ರಕಾಶ್, ಅಂಜಲಿ, ನಿಂಗಮ್ಮ, ಲತಾ, ಗಾಯತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net