ಜ.7ರಂದು ಸ್ವಯಂ ಪ್ರೇರಿತ ಮಂಡ್ಯ ಬಂದ್: ರೈತ ನಾಯಕಿ ಸುನಂದಾ ಜಯರಾಂ ಮಾಹಿತಿ

Press conference on Mandya Bandh Mandya
Published on

ಮಂಡ್ಯ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಸತ್‌ನಲ್ಲಿ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಹಾಗೂ ಅವರ ರಾಜಿನಾಮೆಗೆ ಆಗ್ರಹಿಸಿ ಜ.7ರಂದು ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಸ್ವಯಂ ಪ್ರೇರಿತ ಮಂಡ್ಯ ಬಂದ್‌ಗೆ ಕರೆ ನೀಡಲಾಗಿದೆ ಎಂದು ರೈತ ನಾಯಕಿ ಸುನಂದಾ ಜಯರಾಂ ತಿಳಿಸಿದರು.

ಅಮಿತ್ ಷಾ ಸಂಸತ್‌ನಲ್ಲಿ ಅಂಬೇಡ್ಕರ್ ಅವರ ಹೆಸರು ಹಾಗೂ ವ್ಯಕ್ತಿತ್ವಕ್ಕೆ ಕಳಂಕ ಮಾಡುವ ರೀತಿ ಹೇಳಿಕೆ ನೀಡಿದ್ದಾರೆ. ಸಂವಿಧಾನ ತಿರುಚುವ, ಬದಲಾಯಿಸುವ ಕೃತ್ಯಕ್ಕೆ ಸ್ಪೂರ್ತಿ ನೀಡುವ ತಳಹದಿ ಹಾಕುವ ಕೆಲಸ ಮಾಡಲಾಗುತ್ತಿದೆ. ಇದು ಅವರ ಮನಸ್ಥಿತಿ ತೋರುವುದರ ಜತೆಗೆ ಅಪಾಯದ ಸುಳಿವು ತೋರುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಕರುನಾಡ ಸೇವಕರು ವಿಭಾಗೀಯ ಸಂಚಾಲಕ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಅಮಿತ್ ಷಾ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷವೂ ರಸ್ತೆಗಿಳಿದು ಹೋರಾಟ ಮಾಡುವ ನಿರೀಕ್ಷೆ ಮಾಡಿದ್ದೆವು. ಆದರೆ ಸಂವಿಧಾನ ರಕ್ಷಣೆಯನ್ನು ಕೇವಲ ತೋರಿಕೆಯ ಮಟ್ಟಕ್ಕೆ ಕಾಳಜಿ ತೋರುವ ಕಾಂಗ್ರೆಸ್‌ಗೂ ಬಿಜೆಪಿ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದರು.

ವಿವಿಧ ಸಂಘಟನೆಯ ಲಕ್ಷ್ಮಣ್ ಚೀರನಹಳ್ಳಿ, ಅಂದಾನಿ ಸೋಮನಹಳ್ಳಿ, ಸಿ.ಕುಮಾರಿ, ಗಂಗರಾಜ್ ಹನಕೆರೆ, ಎಚ್.ಡಿ.ಜಯರಾಂ, ಎಂ.ವಿ.ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net