ಸೆ.13ರಂದು ಜಿಲ್ಲಾದ್ಯಂತ ಲೋಕ ಅದಾಲತ್: ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಮಾಹಿತಿ

Press Conference on Lok Adalat Mandya
Published on

ಮಂಡ್ಯ: ಜಿಲ್ಲಾದ್ಯಂತ ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಏಳು ತಾಲೂಕಿನಲ್ಲೂ ಪ್ರಕರಣ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಬೈಠಕ್ ನಡೆಸಲಾಗುವುದು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಮಣ್ಯ ತಿಳಿಸಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ವಿವಾದ ಒಳಗೊಂಡಂತೆ ಸಿವಿಲ್ ವ್ಯಾಜ್ಯ, ವಿಭಾಗದ ದಾವೆ, ಹಣವಸೂಲಾತಿ ದಾವೆ, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಿಸಿರುವ ದಾವೆ, ಮೋಟಾರು ವಾಹನಗಳ ಪ್ರಕರಣ, ಎಂಎಂಆರ್‌ಡಿ ಪ್ರಕರಣ, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣ, ರಾಜಿ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣ ಮತ್ತು ಚೆಕ್‌ಬೌನ್ಸ್ ಪ್ರಕರಣ, ಎಲ್‌ಎಸಿ ಪ್ರಕರಣ, ಎಕ್ಸಿಕ್ಯೂಶನ್ ಪ್ರಕರಣವನ್ನು ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಾಲಯದಲ್ಲಿ ಲೋಕ ಅದಾಲತ್ ರಚಿಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಲೋಕ ಅದಾಲತ್ ಪೀಠದಲ್ಲಿ ನ್ಯಾಯಾಧೀಶರು ಮತ್ತು ನುರಿತ ವಕೀಲರು ವಾದಿ-ಪ್ರತಿವಾದಿಗಳ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ. ಇಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ನ್ಯಾಯಲಯದ ಶುಲ್ಕ ವಿಧಿಸುವುದಿಲ್ಲ. ಈಗಾಗಲೇ ಕಟ್ಟಿರುವಂತಹ ನ್ಯಾಯಾಲಯದ ಶುಲ್ಕವನ್ನು ಸಹ ಮರಳಿ ನೀಡಲಾಗುತ್ತದೆ. ಪ್ರಕರಣ ಇತ್ಯರ್ಥಗೊಂಡರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ. ಈ ತೀರ್ಮಾನವು ನ್ಯಾಯಾಲಯ ನೀಡಿದ ತೀರ್ಮಾನದಷ್ಟೇ ಮೌಲ್ಯ ಹೊಂದಿರುತ್ತದೆ ಎಂದು ವಿವರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಮಾತನಾಡಿ, ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣ ಮಾಡುವುದು ಲೋಕ ಅದಾಲತ್‌ನ ಮುಖ್ಯ ಉದ್ದೇಶ. ರಾಜಿ ಮಾಡಬಹುದಾದ ಪ್ರಕರಣಗಳ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇತ್ಯರ್ಥಪಡಿಸಿಕೊಳ್ಳಬಹುದು. ನ್ಯಾಯಾಲಯದಲ್ಲಿ ಬಾಕಿ ಇರುವಂತಹ ಪ್ರಕರಣಗಳ ಜತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ ವ್ಯಾಜ್ಯಪೂರ್ವ ಪ್ರಕರಣಗಳು(ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕ, ಕಾರ್ಮಿಕ ವಿವಾದ ಪ್ರಕರಣ, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ, ವೈವಾಹಿಕ ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಾರರಿಗೆ ನೋಟೀಸ್ ನೀಡಿ ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಬೈಠಕ್ ನಡೆಸಿ ಅದಾಲತ್‌ನಲ್ಲಿ ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.

ಇಂತಹ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಕೀಲರ ಮುಖಾಂತರ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದಾಗಿರುತ್ತದೆ. ಇದರಿಂದ ಪ್ರಕರಣವು ಶೀಘ್ರವಾಗಿ ಇತ್ಯರ್ಥವಾಗುತ್ತದೆ ಹಾಗೂ ಹಣ ಹಾಗೂ ಅಮೂಲ್ಯವಾದ ಸಮಯ ಉಳಿತಾಯವಾಗುತ್ತದೆ. ಈ ಬಾರಿಯ ಅದಾಲತ್‌ನಲ್ಲಿ ಕಕ್ಷಿದಾರರ ಹೆಚ್ಚಿನ ಪ್ರಕರಣ ಇತ್ಯರ್ಥಪಡಿಸಿ ಕಕ್ಷಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ನ್ಯಾಯಧಾನ ಮಾಡಬೇಕೆಂಬ ಇಚ್ಫೆಯಿಂದ ಪ್ರಕರಣ ತೆಗೆದುಕೊಳ್ಳಲಾಗುವುದು. ಜನ ಸಾಮಾನ್ಯರು ಹಾಗೂ ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಂಡು ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಹುದಾದ ಪ್ರಕರಣಗಳಲ್ಲಿ ರಾಜಿ ಸಂಧಾನವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಲು ಸೆ.30ರವರೆಗೆ ವಿಶೇಷ ಮಧ್ಯಸ್ಥಿಕೆ ಅಭಿಯಾನ ನಡೆಯುತ್ತಿರುತ್ತದೆ. ವಕೀಲರು ಹಾಗೂ ಕಕ್ಷಿದಾರರು ಅಭಿಯಾನದ ಸದುಪಯೊಗಪಡಿಸಿಕೊಳ್ಳಬೇಕು. ರಾಜ್ಯಸರ್ಕಾರ ಸಂಚಾರ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಈ ರಿಯಾಯಿತಿ ಸೆ.12ರವರೆಗೆ ಮಾತ್ರ ಅನ್ವಯವಾಗುತ್ತಿದ್ದು, ಈ ಕಾಲಾವಕಾಶವನ್ನು ಸದುಪಯಾಗಪಡಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಮಾತನಾಡಿ, ಸಂಚಾರ ಪೊಲೀಸ್ ಇ-ಚಲನ್ ದಂಡವು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಪ್ರತಿ ದಿನ ಅಂದಾಜು 300 ಇ-ಚಲನ್ ಮೂಲಕ ದಂಡ ಪಾವತಿಯಾಗುತ್ತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಮಾತನಾಡಿ, ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆದಷ್ಟು ಕಕ್ಷಿದಾರರಿಗೆ ಒತ್ತಡ ಹಾಗೂ ಖರ್ಚು ಹೆಚ್ಚಾಗುತ್ತದೆ. ಇದರ ಬದಲಿಗೆ ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶ ಸಂದೀಪ್ ಸಾಲಿಯಾನ, ಸರ್ಕಾರಿ ಅಭಿಯೋಜಕಿ ವೆಂಕಟಲಕ್ಷ್ಮಮ್ಮ, ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಕ ಬಸವರಾಜು, ವಕೀಲರ ಸಂಘದ ಕಾರ್ಯದರ್ಶಿ ಸಿದ್ದರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net