ನ.28ರಿಂದ ಮೂರು ದಿನ ಕೃಷಿಮೇಳ: ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಡಾ.ಹರಿಣಿಕುಮಾರ್ ಮಾಹಿತಿ

Press conference on Krishi Mela Mandya
Published on

ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿ ನ.28 ರಿಂದ 30ರವರೆಗೆ ‘‘ಸಮಗ್ರ ಕೃಷಿಯಿಂದ ಸುಸ್ಥಿರತೆ’’ ಘೋಷವಾಕ್ಯದಡಿ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ತಿಳಿಸಿದರು.

ಈವರೆಗೆ ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಮೇಳ ನಡೆಸಲಾಗುತ್ತಿತ್ತು. ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಬಳಿಕ ಇದೇ ಮೊದಲ ಬಾರಿಗೆ ಕೃಷಿ ಮೇಳ ಸಂಘಟಿಸಲಾಗಿದೆ. ಎರಡು ದಿನ ನಡೆಯುತ್ತಿದ್ದ ಮೇಳವನ್ನು ಮೂರು ದಿನಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೇಳದಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿನೂತನ ತಂತ್ರಜ್ಞಾನ, ಹೊಸ ತಳಿಗಳು ಹಾಗೂ ಹೊಸ ಆವಿಷ್ಕಾರಗಳ ಪರಿಚಯ ಮಾಡಿಕೊಡಲಾಗುವುದು. ಕೃಷಿಯಲ್ಲಿ ತಾಂತ್ರಿಕತೆ, ಸಂಕರಣ ತಳಿಗಳ ಪರಿಚಯ, ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ, ದೇಸಿ ರಾಸುಗಳ ಪ್ರದರ್ಶನ, ಉಷ್ಣವಲಯ ಮತ್ತು ಅರೆಉಷ್ಣವಲಯದ ಬೆಳೆಗಳನ್ನು ಪರಿಚಯಿಸಲಾಗುವುದು. ಸಮಗ್ರ ಕೃಷಿ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ದತಿ, ದೇಶಿ ತಳಿಗಳ ಪ್ರಾತ್ಯಕ್ಷಿತೆ, ನೂತನ ತಳಿಗಳು ಮತ್ತು ತಂತ್ರಜ್ಞಾನ, ಮಣ್ಣು ಮತ್ತು ನೀರು ಸಂರಕ್ಷಣಾ ವಿಧಾನ, ಕಾಫಿ ಮತ್ತು ಸಾಂಬಾರು ಬೆಳೆಗಳ ತಂತ್ರಜ್ಞಾನ, ಹೈಟೆಕ್-ತೋಟಗಾರಿಕೆ ಪ್ರಾತ್ಯಕ್ಷಿಕೆ, ಸುಧಾರಿತ ಮೇವಿನ ತಳಿ ಮತ್ತು ತಾಂತ್ರಿಕತೆ, ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ಅರಣ್ಯ ಉತ್ಪನ್ನಗಳು, ಸೆಕೆಂಡರಿ ಕೃಷಿ(ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ), ರೇಷ್ಮೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆ ವಿಶೇಷ ಆಕರ್ಷಣೆಗಳಾಗಿವೆ ಎಂದು ವಿವರಿಸಿದರು.

ಕೃಷಿಯಿಂದ ವಿಮುಖರಾಗುತ್ತಿರುವ ಯುವ ಪೀಳಿಗೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ನವೋದ್ಯಮಗಳ ಪರಿಚಯ ಮಾಡಲಾಗುತ್ತಿದೆ. 100 ಹೈಟೆಕ್, 220 ಸಾಮಾನ್ಯ ಹಾಗೂ 30 ಸ್ವಸಹಾಯ, ರೈತ ಉತ್ಪನ್ನ ಮಾರಾಟ ಮತ್ತು ನರ್ಸರಿ ಮಳಿಗೆ ತೆರೆಯಲಾಗುವುದು. ಅಲ್ಲದೆ ರೈತ ಉತ್ಪಾದಕರು ಹಾಗೂ ವಾಣಿಜ್ಯ ಖರೀದಿದಾರರ ಭೇಟಿಗೆ ಅವಕಾಶ. ವಿಸ್ಮಯಕಾರಿ ಕೀಟ ಪ್ರಪಂಚ ಹೆಸರಿನಲ್ಲಿ ಉತ್ಪನ್ನಗಳನ್ನು ತಯಾರಿಸುವ ಮೌಲ್ಯವರ್ಧನೆ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ಮೈಸೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಕೃಷಿ ವಿದ್ಯಾಲಯಗಳು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಧೀನದಲ್ಲಿ ಬರಲಿದೆ. ಮಂಡ್ಯ, ಮೈಸೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಈ ಐದೂ ಜಿಲ್ಲೆಗಳ ರೈತರ ಅಭಿವೃದ್ಧಿಗೆ ಮಂಡ್ಯ ಕೃಷಿ ವಿವಿ ಶ್ರಮಿಸಲಿದೆ ಎಂದು ಹೇಳಿದರು.

ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ, ವಿಸ್ತರಣಾ ನಿರ್ದೇಶಕ ಡಾ.ರಾಮಚಂದ್ರ, ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್, ಸಹ ನಿರ್ದೇಶಕ ಡಾ.ಎ.ಡಿ.ರಂಗನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net