ಅ.27ರಂದು ನಗರದಲ್ಲಿ ಉದ್ಯೋಗಮೇಳ: ಫಸ್ಟ್ ಸರ್ಕಲ್ ಸಂಸ್ಥೆಯ ಸದಸ್ಯ ನಾಗರಾಜ್‌ಗೌಡ ಮಾಹಿತಿ

Press Conference on Job Fair mandya
Published on

ಮಂಡ್ಯ: ಬೆಂಗಳೂರಿನ ಫಸ್ಟ್ ಸರ್ಕಲ್ ಸಂಸ್ಥೆಯಿಂದ ನಗರದ ಪಿಇಎಸ್ ಕಾಲೇಜಿನಲ್ಲಿ ಅ.27ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಅದರಂತೆ 4000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಸದಸ್ಯ ನಾಗರಾಜ್‌ಗೌಡ ತಿಳಿಸಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ಜಿಲ್ಲಾಡಳಿತ, ಪಿಇಎಸ್ ಪದವಿ ಕಾಲೇಜು ಸಹಯೋಗದಲ್ಲಿ ಮೇಳವನ್ನು ಸಂಘಟಿಸಲಾಗಿದೆ. ಈ ಸಂಬಂಧ 120ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು, 100ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ನೇಮಕ ಪ್ರಕ್ರಿಯೆ ನಡೆಸಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೇಳಕ್ಕೆ ಪೂರಕವಾಗಿ ಅ.26ರಂದು ಮಧ್ಯಾಹ್ನ 2ಕ್ಕೆ ಪಿಇಎಸ್ ಕಾಲೇಜಿನ ಸ್ವಾಮಿವಿವೇಕಾನಂದ ರಂಗಮಂದಿರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮವಿರಲಿದೆ. ಈ ವೇಳೆ ಬಯೋಡೇಟ ಸಿದ್ಧಪಡಿಸುವಿಕೆ, ಅರ್ಜಿ ಸಲ್ಲಿಸುವ ವಿಧಾನ, ಸಂದರ್ಶನ ಎದುರಿಸುವ ರೀತಿ ಮತ್ತಿತರ ವಿಷಯದ ಬಗ್ಗೆ ತರಬೇತಿ ನೀಡಲಾಗುವುದು. ಮೇಳದಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿ, ಕೌಶಲ ತರಬೇತಿ ಅಗತ್ಯಯುಳ್ಳವರಿಗೂ ಸ್ಕಿಲ್ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

ಪಿಇಎಸ್ ಪದವಿ ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ಪ್ರತಿ ಕೊಠಡಿಗಳಲ್ಲಿ ಮೂರು ಕಂಪನಿಗಳಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಈಗಾಗಲೇ 60ಕ್ಕೂ ಹೆಚ್ಚು ಕಂಪನಿಗಳು ಮೇಳಕ್ಕೆ ಬಂದು ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸುವುದಾಗಿ ಒಪ್ಪಿಗೆ ನೀಡಿವೆ. ಮೇಳದ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಸಂಸ್ಥೆಯಿಂದ ವಾರ್‌ರೂಮ್ ಸ್ಥಾಪಿಸಿ, ಜನರಿಗೆ ಎಸ್‌ಎಂಎಸ್ ಕಳುಹಿಸಲಾಗುವುದು. ಸಮಾಜದಲ್ಲಿ ಉದ್ಯಮಶೀಲತೆ, ವ್ಯಾಪಾರೋದ್ಯಮದಲ್ಲಿ ಮಾರ್ಕೆಟಿಂಗ್, ಪೂರೈಕೆದಾರರ ಗುರುತಿಸುವಿಕೆ, ನೇಮಕಾತಿ ಹಾಗೂ ಸಂಪನ್ಮೂಲಗಳ ಪರಸ್ಪರ ಹಂಚಿಕೆಯನ್ನು ಉತ್ತೇಜಿಸುವ ಸಲುವಾಗಿ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಯಾವುದೇ ಲಾಭದ ನಿರೀಕ್ಷೆಯಿಂದ ಯುವಜನರಿಗೆ ಒಳ್ಳೆಯದಾಗಲೆಂಬ ಆಶಯದೊಂದಿಗೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಉದ್ಯೋಗಾಕಾಂಕ್ಷಿಗಳಿಗೆ ಉನ್ನತ ಅವಕಾಶ ಒದಗಿಸುವುದು ನಮ್ಮ ಸಂಸ್ಥೆಯ ಗುರಿ ಎಂದರು.

ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಫಸ್ಟ್ ಸರ್ಕಲ್ ಸಂಸ್ಥೆ ಸದಸ್ಯರಾದ ಚಂದ್ರಶೇಖರ್, ಅಮರೇಶ್, ಹರೀಶ್, ಶಿವಲಿಂಗೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net