

ಮಂಡ್ಯ: ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್ ವತಿಯಿಂದ ಲೀಡ್ ಟ್ರೈನಿಂಗ್ ಕಾರ್ಪೋರೇಟ್ ಸಲ್ಯೂಷನ್ಸ್ ಸಹಯೋಗದೊಂದಿಗೆ ಮೇ 31ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಲೀಡ್ ಟ್ರೈನಿಂಗ್ ಕಾರ್ಪೋರೇಟ್ ಸಲ್ಯೂಷನ್ಸ್ ಸಿಇಒ ಶ್ರೀವಿದ್ಯಾ ತಿಳಿಸಿದರು.
ಮೇಳದಲ್ಲಿ ಸುಮಾರು 75 ಉದ್ಯೋಗ ಸಂಸ್ಥೆ ಭಾಗವಹಿಸುವ ನಿರೀಕ್ಷೆ ಇದೆ. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸಲಿದ್ದಾರೆ. 1000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉದ್ಯೋಗ ಒದಗಿಸುವ ಭರವಸೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇಳದಲ್ಲಿ 18 ರಿಂದ 35 ವರ್ಷದೊಳಗಿನ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದೆ. ಸೆಕ್ಯೂರಿಟಿ ಹಂತದಿಂದ ಎಲ್ಲ ರೀತಿಯ ಉದ್ಯೋಗಗಳ ಸಂಬಂಧಿತ ಸಂಸ್ಥೆಗಳು ಭಾಗವಹಿಸಲಿವೆ. ಅಲ್ಲದೇ ಮೇಳ ನಡೆಯುವ ವೇಳೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉದ್ಯೋಗ ಪಡೆಯುವ ಸಂಬಂಧ ಒಂದೂವರೆ ಗಂಟೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಬೆಳಗ್ಗೆ 11ರಿಂದ 12.30 ಹಾಗೂ ಸಂಜೆ 3.30ರಿಂದ 5 ಗಂಟೆವರೆಗೆ ನಡೆಯಲಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಪ್ರಭುಸ್ವಾಮಿ, ಯೋಜನಾ ಸಮನ್ವಯಾಧಿಕಾರಿ ಎಲ್.ಪ್ರಭುಸ್ವಾಮಿ, ಪ್ರಾಧ್ಯಾಪಕಿ ವಿಜಯಶ್ರೀ, ಮಾದೇಶ್ ಇದ್ದರು.