ಎಫ್‌ಐಆರ್ ದಾಖಲಿಸದ ಎಸ್‌ಐ ರವಿಕುಮಾರ್: ಜಮೀನಿನ ಮಾಲೀಕರ ಗಂಭೀರ ಆರೋಪ

Press conference on illegal land account Mandya
Published on

ಮಂಡ್ಯ: ಮಳವಳ್ಳಿ ತಾಲೂಕು ಕಿರುಗಾವಲು ಹೋಬಳಿಯ ನೇಣನೂರು ಗ್ರಾಮದ ಸರ್ವೇ ನಂಬರ್ 134/1ಎ ಯಲ್ಲಿನ ಎರಡು ಕೋಟಿ ರೂ ಮೌಲ್ಯದ 1.12 ಎಕರೆ ಜಮೀನನ್ನು ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ದೂರು ನೀಡಿ 23 ದಿನ ಕಳೆದರೂ ಎಫ್‌ಐಆರ್ ದಾಖಲಿಸಲು ಮಳವಳ್ಳಿ ಟೌನ್ ಠಾಣೆಯ ಎಸ್‌ಐ ಎಂ.ರವಿಕುಮಾರ್ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಜಮೀನು ಮಾಲೀಕರೂ ಆದ ದಂಪತಿ ಎಂ.ಬಿ.ಉಮಾಪತಿ ಹಾಗೂ ಎಚ್.ಪಿ.ಲಲಿತಾ ಕುಮಾರಿ ಗಂಭೀರ ಆರೋಪ ಮಾಡಿದರು.

ಈ ಜಮೀನನ್ನು ನಾವು 1986-87ರಲ್ಲಿ ಖರೀದಿ ಮಾಡಿದ್ದೇವೆ. ಅಂತೆಯೇ ಎಂ.ಬಿ.ಉಮಾಪತಿ ಹೆಸರಿನಲ್ಲಿ ದಾಖಲೆಯೂ ಆಗಿದೆ. ಆದರೆ ನಮಗೆ ಮಾಹಿತಿ ಇಲ್ಲದಂತೆ ಇತ್ತೀಚೆಗೆ ಅಂದರೆ 2024 ಆ.28ರಂದು ಜಮೀನನ್ನು ಬೇರೊಬ್ಬರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಇದನ್ನು ನಮ್ಮ ಮಗ ಮಲ್ಲಿಕ್ ಮೂಲಕವೇ ಇತರರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಬಂತು. ಆದ್ದರಿಂದ ಅಗತ್ಯ ದಾಖಲೆಗಳೊಂದಿಗೆ ಮಳವಳ್ಳಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದಾಗ ಅಕ್ರಮವಾಗಿ ಖಾತೆಯಾಗಿರುವುದು ಗೊತ್ತಾಯಿತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮಗ ಮಲ್ಲಿಕ್ ಇಂಗ್ಲೆಂಡ್‌ನಲ್ಲಿ ವಾಸವಿದ್ದು, 2018ರಲ್ಲಿ ಆಸ್ತಿಯಲ್ಲಿ ಭಾಗ ಕೊಡಬೇಕೆಂದು ಮಳವಳ್ಳಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದನು. ಆದರೆ ನ್ಯಾಯಾಲಯವು ದಾವೆಯನ್ನು ವಜಾಗೊಳಿಸಿತ್ತು. ನಂತರದಲ್ಲಿ ಮೈನರ್ ಗಾರ್ಡಿಯನ್ ರದ್ದುಪಡಿಸಿ ಜಮೀನು ಖಾತೆ ಮಾಡಿಕೊಡುವಂತೆ ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದ್ದನು. ಈ ಹಿನ್ನೆಲೆಯಲ್ಲಿ ಮಗನ ವಂಚನೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿ ದಾಖಲೆ ಸಲ್ಲಿಸಿದ್ದರೂ, ಅವರು ಸ್ವಹಿತಾ ಶಕ್ತಿಯಿಂದ ಮಲ್ಲಿಕ್ ಹೆಸರಿಗೆ ಖಾತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ರೀತಿ ಅಕ್ರಮ ವೆಸಗಿರುವ ಮಲ್ಲಿಕ್ ಸೇರಿದಂತೆ ಹಲವರ ವಿರುದ್ಧ ದೂರು ನೀಡಲಾಗಿದೆ. ಆದರೆ ಎಸ್‌ಐ ಎಂ.ರವಿಕುಮಾರ್ ದೂರನ್ನು ಪರಿಗಣಿಸದೇ ಹಿರಿಯ ನಾಗರಿಕರಾದ ನಮ್ಮನ್ನು ಏಕ ವಚನದಿಂದ ನಿಂದಿಸಿ ಅವಮಾನ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಜರುಗಿಸಿ, ದೂರಿದ ಆಧಾರದ ಮೇಲೆ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net